ಧಾರವಾಡ: ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಂಪರೆ ಗೌರವಿಸುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆಯು ಶಾಶ್ವತ ರೇಖಾ ಚಿತ್ರಿತ ರದ್ಧತಿ ಮುದ್ರೆ(Permanent Pictorial Cancellations–PPCs) ಬಿಡುಗಡೆಗೊಳಿಸುತ್ತಿದೆ ಎಂದು ಕರ್ನಾಟಕ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಹೇಳಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ. ಬೇಂದ್ರೆ ನಿವಾಸದ ಶಾಶ್ವತ ರೇಖಾಚಿತ್ರಿತ ರದ್ಧತಿ ಮುದ್ರೆ ಬಿಡುಗಡೆ ಬಹಳ ವಿರಳ ಮತ್ತು ಅನನ್ಯ ಎಂದ ಅವರು, ಧಾರವಾಡ ವೃತ್ತದಿಂದ ಮೂರು ರೇಖಾಚಿತ್ರಿತ ರದ್ಧತಿ ಮೋಹರುಗಳನ್ನು ಬಿಡುಗಡೆಗೊಳಿಸಿದೆ. ಆದಿಕವಿ ಪಂಪ, ಉಣಕಲ್ ಹಾಗೂ ಡಾ.ದ.ರಾ. ಬೇಂದ್ರೆ ನಿವಾಸದ್ದಾಗಿದೆ ಎಂಬ ಮಾಹಿತಿ ನೀಡಿದರು.
ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಬೇಂದ್ರೆಯವರ ನಿವಾಸವನ್ನು ಶಾಶ್ವತ ರೇಖಾಚಿತ್ರಿತ ಮೋಹರಿಗೆ ಆಯ್ಕೆ ಮಾಡಿರುವುದಕ್ಕೆ ಭಾರತೀಯ ಅಂಚೆ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್‌ಕುಮಾರ್ ಮಾತನಾಡಿ, ಇಂತಹ ಪ್ರಮುಖ ವ್ಯಕ್ತಿಗಳ ಮತ್ತು ಸ್ಮಾರಕಗಳ ಶಾಶ್ವತ ರೇಖಾಚಿತ್ರಿತ ರದ್ಧತಿಗಳ ದಾಖಲೆಗಳು ಬಹುಪ್ರಾಮುಖ್ಯತೆ ಹೊಂದಿವೆ. ಇವು ಭಾರತೀಯ ಅಂಚೆ ವ್ಯವಸ್ಥೆ ಮೂಲಕ ಅಂಚೆ- ಚೀಟಿ ಪ್ರೇಮಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಮರಣಿಕೆಯಾಗಿ ಉಳಿಯಬಲ್ಲವಾಗಿವೆ ಎಂದರು.
ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ಡಾ. ಶಶಿಧರ ನರೇಂದ್ರ, ಸುಕುಮಾರ ನಾಯ್ಕ್, ಪ್ರೊ. ಎನ್.ಆರ್. ಬಾಳಿಕಾಯಿ, ಸುರೇಶ ಗುದಗನವರ, ದೀಪಕ ಆಲೂರ ಸೇರಿದಂತೆ ಹಲವರಿದ್ದರು.