ಕನ್ನಡಪ್ರಭ ವಾರ್ತೆ ಉಡುಪಿ
ವಚನ ಸಾಹಿತ್ಯಗಳು ಸಮಾಜದಲ್ಲಿ ಅನೇಕ ರೀತಿಯಲ್ಲಿ ಸುಧಾರಣೆಯನ್ನು ತಂದಿದ್ದು, ಇಂತಹ ವಚನಗಳನ್ನು ಸಂಶೋಧಿಸಿ ಅವುಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅದ್ಭುತ ಕೆಲಸವನ್ನು ಮಾಡಿದ ಮಹಾನೀಯರಾದ ಡಾ.ಫ.ಗು.ಹಳಕಟ್ಟಿ ಅವರನ್ನು ನೆನೆಯುವ ಉದ್ದೇಶದಿಂದ ಅವರ ಜನ್ಮ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು. ಉಪನ್ಯಾಸ ನೀಡಿ ಮಾತನಾಡಿದ ಡಾ.ಟಿ.ಎಂ.ಎ ಪೈ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್, ಅತ್ಯಂತ ಸರಳ ಜೀವನ ಜೀವಿಸಿದ ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ತಮ್ಮ ಸ್ವಂತ ಹಣದಿಂದ ಮುದ್ರಣ ಮಾಡುವುದರೊಂದಿಗೆ, ವಚನಗಳಿಗೆ ಬಿಡುಗಡೆ ಭಾಗ್ಯ ಒದಗಿಸಿದರು. ಕನ್ನಡ ಸಾಹಿತ್ಯದ ಏಳಿಗೆಗಾಗಿ ಶ್ರಮಿಸುವುದರ ಜೊತೆಗೆ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿ, ಕನ್ನಡಿಗರಲ್ಲಿ ಕವಿದಿದ್ದ ವಿಸ್ಮೃತಿ ಪೊರೆಯನ್ನು ಕಳಚಿ, ಕನ್ನಡ ಸಾಹಿತ್ಯದ ಮಹತ್ವದ ಕುರಿತು ಅರಿವು ಮೂಡಿಸಿದರು ಎಂದರು.
ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ನಿರಂಜನ್, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ರಾಮಾಂಜಿ ನಿರೂಪಿಸಿದರೆ, ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ವಂದಿಸಿದರು.