ರವಿಕುಮಾರ್‌ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಸೌಮ್ಯ ರೆಡ್ಡಿ

KannadaprabhaNewsNetwork | Published : Jul 3, 2025 11:48 PM
ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಬಿಜೆಪಿ ಎಂಎಲ್ಸಿ ರವಿಕುಮಾರ್ ಆಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಬಿಜೆಪಿ ಎಂಎಲ್ಸಿ ರವಿಕುಮಾರ್ ಆಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ನಮ್ಮ ಪ್ರತಿಭಟನೆ ಆರಂಭವಾಗಿದ್ದು, ಫಲಿತಾಂಶ ಬರುವವರೆಗೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಎಚ್ಚರಿಸಿದ್ದಾರೆ. ಶಾಲಿನಿ ರಜನೀಶ್ ವಿರುದ್ಧ ನಾಲಗೆ ಹರಿಯಬಿಟ್ಟಿರುವ ವಿಧಾನ ಎನ್.ರವಿಕುಮಾರ್ ಹೇಳಿಕೆ ಖಂಡಿಸಿ ಕೆಪಿಸಿಸಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಒಬ್ಬ ಮಹಿಳೆ ಐಎಎಸ್‌ ಅಧಿಕಾರಿಯಾಗಿ ಸಾಧನೆ ಮಾಡಿದ್ದು ಎಲ್ಲರಿಗೂ ಗೌರವದ ವಿಚಾರ. ಆದರೆ ಬಿಜೆಪಿ ಮುಖಂಡರು ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ.‌ ಹಿಂದೊಮ್ಮೆ ಫೌಝಿಯಾ ಖಾನಂ ಬಗ್ಗೆಯೂ ಮಾತನಾಡಿದ್ದರು.‌ ಮಹಿಳೆಯರ ಬಗ್ಗೆ ಬಿಜೆಪಿಗೆ ಗೌರವ ಇದ್ದರೆ ರವಿಕುಮಾರ್ ಅವರನ್ನು ಪಕ್ಷ ಮತ್ತು ಶಾಸಕ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಸೌಮ್ಯ ರೆಡ್ಡಿ ಆಗ್ರಹಿಸಿದರು.ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ರವಿಕುಮಾರ್ ಕೂಡಲೆ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಬಿಜೆಪಿ ಕೈಗೊಳ್ಳುವ ಕ್ರಮ ಏನೆಂದು ತಿಳಿಸಬೇಕು ಎಂದು ಆಗ್ರಹಿಸಿದರು.ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಮಾತನಾಡಿ, ಮಹಿಳೆಯರನ್ನು ಅಗೌರವಿಸುವುದು ಬಿಜೆಪಿಯವರ ಸಂಸ್ಕೃತಿಯಾ? ಬಿಜೆಪಿಯಲ್ಲಿರುವ ಮಹಿಳೆಯರು ಕಣ್ಮುಚ್ಚಿ ಕೂತಿದ್ದೀರಲ್ವಾ? ನಿಮಗೆ ಸ್ವಾಭಿಮಾನ ಇಲ್ಲವಾ ಎಂದು ಕಿಡಿಕಾರಿದರು‌.ಮಾಜಿ ಸಚಿವ ಅಭಯಚಂದ್ರ ಜೈನ್, ಮುಖಂಡರಾದ ಶಾಹುಲ್ ಹಮೀದ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಸುರೇಖಾ ಚಂದ್ರಹಾಸ್ ಮತ್ತಿತರರು ಇದ್ದರು.

PREV