ಡಾ. ಗಿರಡ್ಡಿ ಶ್ರೇಷ್ಠ ಕ್ರಿಯಾಶೀಲ ಕಥೆಗಾರರಲ್ಲಿ ಒಬ್ಬರು: ಎಸ್‌. ದಿವಾಕರು

KannadaprabhaNewsNetwork |  
Published : May 12, 2024, 01:15 AM IST
11ಡಿಡಬ್ಲೂಡಿ6ಡಾ.ಗಿರಡ್ಡಿ ಗೋವಿಂದರಾಜ ಫೌಂಡೇಶನ್ ಡಾ.ಗಿರಡ್ಡಿ ಅವರ 6ನೇ ಪುಣ್ಯಸ್ಮರಣೆ ನಿಮಿತ್ತ ಶನಿವಾರ ರಂಗಾಯಣದ ಸಾಂಸ್ಕೃತಿಕ ಸಮ್ಮುಚ್ಛಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಡಾ.ಗಿರಡ್ಡಿ ಅವರ ಕಥೆಗಳ ಕುರಿತು ಎಸ್. ದಿವಾಕರ ಮಾತನಾಡಿದರು. | Kannada Prabha

ಸಾರಾಂಶ

ಗಿರಡ್ಡಿ ಪ್ರಪಂಚದ ಕೆಲವೇ ಕೆಲವು ಶ್ರೇಷ್ಠ, ಕ್ರೀಯಾಶೀಲ ಕಥೆಗಾರರಲ್ಲಿ ಒಬ್ಬರು. ಅವರ ಸಮಗ್ರ ಕಥೆಗಳಲ್ಲಿ ಬರೀ 12 ಕಥೆಗಳಿದ್ದು ಅವುಗಳ ಪೈಕಿ ಆರು ಕಥೆಗಳು ಅತ್ಯುತ್ತಮ ಕಥೆಗಳಾಗಿವೆ ಎಂದು ಖ್ಯಾತ ಕಥೆಗಾರ ಎಸ್. ದಿವಾಕರ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಡಾ. ಗಿರಡ್ಡಿ ಗೋವಿಂದರಾಜ್ ಅವರ ಕಥೆಗಳು ಕೆಲವೊಮ್ಮೆ ಸರಳ ಎನಿಸಿದರೂ ಸೂಕ್ಷ್ಮವಾಗಿ ಓದಿದಾಗ ಹಲವು ಆಯಾಮಗಳು ಗೋಚರಿಸಲಿವೆ. ಅವರ ಬಹುತೇಕ ಕಥೆಗಳಲ್ಲಿ ಬೇರೆ ಬೇರೆ ದೃಷ್ಟಿಕೋನಗಳಿವೆ ಎಂದು ಖ್ಯಾತ ಕಥೆಗಾರ ಎಸ್. ದಿವಾಕರ ಹೇಳಿದರು.

ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ಡಾ. ಗಿರಡ್ಡಿ ಅವರ 6ನೇ ಪುಣ್ಯಸ್ಮರಣೆ ನಿಮಿತ್ತ ಶನಿವಾರ ಇಲ್ಲಿಯ ರಂಗಾಯಣದ ಸಾಂಸ್ಕೃತಿಕ ಸಮ್ಮುಚ್ಛಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಡಾ. ಗಿರಡ್ಡಿ ಅವರ ಕಥೆಗಳ ಕುರಿತು ಮಾತನಾಡಿದರು.ಗಿರಡ್ಡಿ ಪ್ರಪಂಚದ ಕೆಲವೇ ಕೆಲವು ಶ್ರೇಷ್ಠ, ಕ್ರೀಯಾಶೀಲ ಕಥೆಗಾರರಲ್ಲಿ ಒಬ್ಬರು. ಅವರ ಸಮಗ್ರ ಕಥೆಗಳಲ್ಲಿ ಬರೀ 12 ಕಥೆಗಳಿದ್ದು ಅವುಗಳ ಪೈಕಿ ಆರು ಕಥೆಗಳು ಅತ್ಯುತ್ತಮ ಕಥೆಗಳಾಗಿವೆ. ಅವುಗಳಲ್ಲಿ ನವ್ಯದ ಪ್ರಭಾವ ಇದ್ದರೂ ಅವರದ್ದೇ ಆದ ನಿಜ ಧ್ವನಿ ಅಡಿಗಿದೆ ಎಂದ ಅವರು ಗಿರಡ್ಡಿ ಅವರ ಮಣ್ಣು ಸೇರಿದಂತೆ ಹಲವು ಕಥೆಗಳ ಉದಾಹರಣೆ ಸಹಿತ ಹೇಳಿದರು.

ಗಿರಡ್ಡಿ ಅವರ ಕಥೆಗಳನ್ನು ಓದಿದಾಗ ತಮ್ಮ ಊರಿನ, ಬಾಲ್ಯದ ಅನುಭವ ಕ್ರಮದಲ್ಲಿ ಸೃಷ್ಟಿಸುವ ಪಾತ್ರಗಳ ಹಿನ್ನೆಲೆ ನೋಡಿದಾಗ ಅವು ನಮ್ಮದೇ ಕಥೆಗಳು ಅನಿಸುತ್ತವೆ. ಜನಸಾಮಾನ್ಯರ ಜೀವನದ ತುಣುಕುಗಳು ಸೇರಿದಂತೆ ಜನಸಾಮಾನ್ಯರಿಗೆ ಹತ್ತಿರವಾದ ವಸ್ತುಗಳು ಅವರ ಕಥೆಗಳಲ್ಲಿ ಅನಾವರಣಗೊಂಡಿವೆ ಎಂದು ಎಸ್. ದಿವಾಕರ ಗಿರಡ್ಡಿ ಅವರ ಕಥೆಗಳನ್ನು ವಿಮರ್ಶಿಸಿದರು.

ಇದಕ್ಕೂ ಮುಂಚೆ ಡಾ. ಗಿರಡ್ಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶಶಿಧರ ತೋಡಕರ, ನಾಡಿಗೆ ಹತ್ತಾರು ಕಥೆ, ಕಾದಂಬರಿ ಹಾಗೂ ವಿಮರ್ಶಾ ಕೃತಿಗಳನ್ನು ನೀಡಿದ ಡಾ. ಗಿರಡ್ಡಿ ಗೋವಿಂದರಾಜ ಅವರನ್ನು ಮರು ಮೆಲಕು ಹಾಕುವು ಹಿನ್ನೆಲೆಯಲ್ಲಿ ಫೌಂಡೇಶನ್ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಹಾಗೂ ಮಧ್ಯದಲ್ಲೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಜೊತೆಗೆ ಅವರ ಸಾಹಿತ್ಯ ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶ ಪ್ರಮುಖವಾಗಿದೆ. ಮೇ 11ರಂದು ಅವರ ಪುಣ್ಯಸ್ಮರಣೆಗೆ ಅವರ ಸಾಹಿತ್ಯ ಪರಿಚಯ ಮಾಡುತ್ತಿದ್ದು, ಸೆಪ್ಟೆಂಬರ್ 11ಕ್ಕೆ ಅವರ ಜನ್ಮದಿನದಂದು ವಿಮರ್ಶಾ ಕೃತಿಗಳನ್ನು ಆಹ್ವಾನಿಸಿ ಅತ್ಯುತ್ತಮ ವಿಮರ್ಶಾ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಗಿರಡ್ಡಿ ಗೋವಿಂದರಾಜ ಅವರು ಭೌತಿಕವಾಗಿ ನಮ್ಮ ಜತೆಗೆ ಇರದೇ ಇದ್ದರೂ ಅವರ ಕಥೆ-ಕಾದಂಬರಿ-ಕಥೆಗಳು ನಮ್ಮ ಮನಸ್ಸಿನಲ್ಲಿ ಹಚ್ಚ-ಹಸಿರಾಗಿವೆ. ಗಿರಡ್ಡಿ ಅವರನ್ನು ಮತ್ತಷ್ಟು ಸಮಾಜಕ್ಕೆ, ಯುವ ಸಾಹಿತಿಗಳಿಗೆ ತೆರೆದಿಡುವ ನಿಟ್ಟಿನಲ್ಲಿ ಫೌಂಡೇಶನ ಕಾರ್ಯ ಮಾಡುತ್ತಿದೆ ಎಂದರು.

ಗಿರಡ್ಡಿ ಗೋವಿಂದರಾಜ ಅವರ ಪತ್ನಿ ಸರೋಜಾ ಗಿರಡ್ಡಿ, ಪುತ್ರ ಸುನೀಲ ಗಿರಡ್ಡಿ ಇದ್ದರು. ರವಿ ಕುಲಕರ್ಣಿ ನಿರೂಪಿಸಿದರು. ಮಲ್ಲಿಕಾರ್ಜುನ ಪಾಟೀಲ, ಡಾ. ರಮಾಕಾಂತ ಜೋಶಿ, ಹ.ವೆಂ. ಕಾಖಂಡಕಿ, ಶಶಿಧರ ನರೇಂದ್ರ ಮತ್ತಿತರರು ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ