ಬರೆದಂತೆ ಬದುಕಿದ ಭಾವಗೀತೆಗಳ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ: ಕೆ.ಟಿ.ಹನುಮಂತು

KannadaprabhaNewsNetwork |  
Published : Jun 02, 2025, 12:37 AM IST
1ಕೆಎಂಎನ್ ಡಿ16 | Kannada Prabha

ಸಾರಾಂಶ

ಸಾಹಿತ್ಯ ಕ್ಷೇತ್ರಕ್ಕೆ ವೆಂಕಟೇಶಮೂರ್ತಿಯವರ ಕೊಡುಗೆ ಅಪಾರ. ಅವರ ಸಾಹಿತ್ಯಗಳು ಚಿರನೂತನ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಂತಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಗಲಿಕೆ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಡು ಕಂಡ ಅಪರೂಪದ ಭಾವಗೀತೆಗಳ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಬರೆದಂತೆ ಬದುಕಿದವರು. ಅವರ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳನ್ನೇ ಕಾಣಬಹುದು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ಸೇವಾಕಿರಣ ಸಭಾಂಗಣದಲ್ಲಿ ಭಾನುವಾರ ಅಸೋಸಿಯೇಷನ್ ಆಫ್ ಆಲಯನ್ಸ್ ಸಂಸ್ಥೆ ಇಂಟರ್ ನ್ಯಾಷನಲ್ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ಆಯೋಜಿಸಿದ್ದ ಖ್ಯಾತ ಸಾಹಿತಿ ದಿ.ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಭಾವಪೂರ್ಣ ಶ್ರದ್ಧಾಂಜಲಿ - ನುಡಿನಮನ, ಗೀತನಮನದಲ್ಲಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರಕ್ಕೆ ವೆಂಕಟೇಶಮೂರ್ತಿಯವರ ಕೊಡುಗೆ ಅಪಾರ. ಅವರ ಸಾಹಿತ್ಯಗಳು ಚಿರನೂತನ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಂತಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಗಲಿಕೆ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಸೇವಾ ಕಿರಣ ವೃದ್ಧಾಶ್ರಮದ ಕಾರ್ಯದರ್ಶಿ ಜಿ.ವಿ.ನಾಗರಾಜು, ಕವಿ ಎಚ್.ಎಸ್.ವಿ. ಅವರ ಉಸಿರು ನಿಂತಿರಬಹುದು. ಆದರೆ ಭಾವಗೀತೆಗಳ ಮೂಲಕ ಅವರ ಹೆಸರು ಅಜರಾಮರವಾಗಿದೆ. ಸಾಹಿತ್ಯ-ಸಂಗೀತ ಲೋಕ ಸದಾ ಸ್ಮರಿಸಿಕೊಳ್ಳುತ್ತದೆ ಎಂದರು.

ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಜಿ.ಧನಂಜಯ ದರಸಗುಪ್ಪೆ, ಕವಿತೆಯಿಂದ ಪ್ರಾರಂಭವಾದ ಸಾಹಿತ್ಯದ ಕೃಷಿ, ಕಥೆ -ಕಾದಂಬರಿ- ನಾಟಕ - ಮಕ್ಕಳ ಸಾಹಿತ್ಯ - ಸಂಪಾದನೆ - ಅನುವಾದ, ಕಿರುತೆರೆ - ಸಿನಿಮಾ ಹಾಗೂ ಮಹಾಕಾವ್ಯದ ವರೆಗೂ ಕೃಷಿ ಮಾಡಿದ ಅಪರೂಪದ ಸಾಹಿತಿಗಳಾಗಿದ್ದರು ಎಂದರು.

‘ಆಡು ಮುಟ್ಟದ ಸೊಪ್ಪಿಲ್ಲ’ದ ರೀತಿ ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ ಎಂದರೆ ತಪ್ಪಾಗಲಾರದು. ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ, ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಲವು ಪ್ರಮುಖ ರಾಜ್ಯ ಪ್ರಶಸ್ತಿಗಳು ದೊರೆತರೂ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ದೊರೆತರೂ ಎಂದು ಹಮ್ಮು -ಬಿಮ್ಮು ತೋರಿದವರಲ್ಲ ಎಂದು ಸ್ಮರಿಸಿದರು.

ಸ್ವತಃ ಹಾಡುಗಾರ -ಸಂಭಾಷಣೆಗಾರ -ನಟ -ನಿರ್ದೇಶಕರರಾಗಿದ್ದು ಹೆಮ್ಮೆಯ ವಿಷಯ, ಅವರು ರಚಿಸಿದ ಭಾವಗೀತೆ- ಶೀರ್ಷಿಕೆ ಗೀತೆ -ಚಿತ್ರಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳೀಯದೇ ಶಾಶ್ವತವಾಗಿ ಉಳಿದಿರುವುದನ್ನು ಸ್ಮರಿಸಬಹುದಾಗಿದೆ ಎಂದರು.

ಇದೇ ವೇಳೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜನಪ್ರಿಯ ಭಾವ ಗೀತೆ-ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲಾಯಿತು.

ಕಾರ್ಯಕ್ರಮದಲ್ಲಿ ಗಾಯಕ ಪ್ರತಿಭಾಂಜಲಿ ಡೇವಿಡ್, ಆರ್ ಎಪಿಸಿಎಂಎಸ್ ನಿರ್ದೇಶಕ ಕಲ್ಲಹಳ್ಳಿ ನಾಗೇಂದ್ರ, 2ನೇ ರಾಜ್ಯಪಾಲ ಚಂದ್ರಶೇಖರ, ಅವಿನಾಶ್, ನಾಗರಾಜು, ಲೋಕೇಶ್, ಶಿಕ್ಷಕ ಬಲ್ಲೇನಹಳ್ಳಿ ಮಂಜುನಾಥ್, ಶಿವು, ಮಲ್ಲೇಶ್ ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!