ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸ್ವಯಂಭೂ ಕವಿ: ಬಿ.ಆರ್.ಲಕ್ಷ್ಮಣರಾವ್

KannadaprabhaNewsNetwork |  
Published : Jun 23, 2025, 11:52 PM IST
೨೩ಕೆಎಂಎನ್‌ಡಿ-೬ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಪುಷ್ಪ, ನುಡಿ, ಗೀತನಮನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಕಾವ್ಯ ಪರಂಪರೆಯಲ್ಲಿ ಭದ್ರವಾಗಿ ಬೇರೂರಿ ಅದರ ಸಾರವನ್ನು ಹೀರಿ ಆಧುನಿಕ ಕಾವ್ಯವೃಕ್ಷವಾಗಿ ಬೆಳೆದು ನಿಂತವರು ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಆದ್ದರಿಂದ ಅವರ ಕಾವ್ಯಗಳು ದೀರ್ಘಾಯುಷ್ಯ ಕಾವ್ಯಗಳಾಗಿ ಉಳಿದುಕೊಂಡಿವೆ. ವೆಂಕಟೇಶಮೂರ್ತಿ ಅವರು ಕುವೆಂಪು ಕಾಲಕ್ಕೆ ಸೇರಿದ ಕವಿ. ಕುಮಾರವ್ಯಾಸನಿಂದ ಪ್ರಭಾವಿತರಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಡಾ.ಎಚ್.ಎಸ್.ವೆಂಕಟೇಶಮೂರ್ತಿ ತಾನಾಗಿಯೇ ಹುಟ್ಟಿದ ಕವಿ. ಅವರೊಬ್ಬ ಸ್ವಯಂ ಭೂ ಕವಿ. ಪ್ರತಿಭೆ, ಪರಿಶ್ರಮ, ಸಂಕಲ್ಪ ಬಲದ ಜಾಗರಣೆ ಮೂಲಕ ಬೆಳೆದುಬಂದು ಶ್ರೇಷ್ಠ ಕವಿಯಾದರು ಎಂದು ಪ್ರಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಬಣ್ಣಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಪುಷ್ಪ, ನುಡಿ, ಗೀತ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕನ್ನಡ ಕಾವ್ಯ ಪರಂಪರೆಯಲ್ಲಿ ಭದ್ರವಾಗಿ ಬೇರೂರಿ ಅದರ ಸಾರವನ್ನು ಹೀರಿ ಆಧುನಿಕ ಕಾವ್ಯವೃಕ್ಷವಾಗಿ ಬೆಳೆದು ನಿಂತವರು ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಆದ್ದರಿಂದ ಅವರ ಕಾವ್ಯಗಳು ದೀರ್ಘಾಯುಷ್ಯ ಕಾವ್ಯಗಳಾಗಿ ಉಳಿದುಕೊಂಡಿವೆ. ವೆಂಕಟೇಶಮೂರ್ತಿ ಅವರು ಕುವೆಂಪು ಕಾಲಕ್ಕೆ ಸೇರಿದ ಕವಿ. ಕುಮಾರವ್ಯಾಸನಿಂದ ಪ್ರಭಾವಿತರಾಗಿದ್ದರು. ಕುಮಾರವ್ಯಾಸ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದರೆ, ಆಧುನಿಕ ಕನ್ನಡ ಕಾವ್ಯದಲ್ಲಿ ರೂಪಕ ಸಾಮ್ರಾಜ್ಯದ ಚಕ್ರವರ್ತಿ ವೆಂಕಟೇಶಮೂರ್ತಿ ಆಗಿದ್ದಾರೆ. ಅವರ ಕಾವ್ಯ, ಭಾವಗೀತೆಗಳಲ್ಲಿ ರೂಪಕಗಳು ಕಿಕ್ಕಿರಿದು ಬರುತ್ತವೆ. ಅವರು ಏನೇ ಮಾತನಾಡಿದರೂ ಅದರಲ್ಲಿ ರೂಪಕವಿರುತ್ತಿತ್ತು. ಕಾವ್ಯಗಳಲ್ಲಿ ನಿರಂತರವಾಗಿ ಹರಿದುಬರುತ್ತಿದ್ದವು ಎಂದರು.

ನನ್ನ ಮತ್ತು ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಒಟ್ಟಿಗೆ ನಡೆಯಿತು. ಸುಮಾರು ೫೦ ವರ್ಷ ಕಾವ್ಯ, ಸುಗಮ ಸಂಗೀತದಲ್ಲಿ ಜೋಡಿ ಜೀವದಂತಿದ್ದೆವು. ಅವನು ಅಂತರ್ಮುಖಿ ಕವಿಯಾದರೆ, ನಾನು ಬಹುಮುಖಿ ಕವಿಯಾಗಿದ್ದೆ. ನಾನು ನವ್ಯ ಕಾಲದ ಚಳವಳಿಯಲ್ಲಿ ಬಂದೆ. ನನಗೆ ಲಂಕೇಶ್, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ವೈಎನ್‌ಕೆ ಅವರು ಗಾಡ್‌ಫಾದರ್‌ಗಳಾಗಿದ್ದರು. ಆದರೆ, ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಮಲ್ಲಾಡಿಹಳ್ಳಿಯಲ್ಲಿ ಶಾಲಾ ಶಿಕ್ಷಕರಾಗಿದ್ದುಕೊಂಡು ತಾನಾಗಿಯೇ ಕವಿಯಾಗಿ ಬೆಳವಣಿಗೆ ಕಂಡರು ಎಂದು ತಿಳಿಸಿದರು.

ಸತ್ವ ಮತ್ತು ಸಮೃದ್ಧಿ ಇದ್ದಂತಹ ಸಾಹಿತ್ಯವನ್ನು ಕೊಟ್ಟವರು ವೆಂಕಟೇಶಮೂರ್ತಿ. ಕಾವ್ಯದ ಪ್ರಕಾರ, ಪ್ರಭೇಧ ಎಲ್ಲದರಲ್ಲೂ ಕೆಲಸ ಮಾಡಿದರು. ನಮ್ಮ ಕಾವ್ಯಯಾನ, ವಿಮಾನಯಾನವೂ ಒಟ್ಟಿಗೇ ನಡೆದಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ನಮ್ಮ ಮೊದಲ ವಿಮಾನಯಾನ ನಡೆದು ಆನಂತರದಲ್ಲಿ ವಿದೇಶಗಳಿಗೆಲ್ಲಾ ಹೋಗಿದ್ದೆವು. ಡಾ.ಜಿ.ಎಸ್.ಶಿವರುದ್ರಪ್ಪ ಅವರು ನಮ್ಮಿಬ್ಬರನ್ನು ಕನ್ನಡ ಕಾವ್ಯಲೋಕದ ಅಶ್ವಿನಿ ದೇವತೆಗಳು ಎಂದು ಕರೆದಿದ್ದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಪು.ತಿ.ನ. ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ, ಗಾಯಕ ಅಪ್ಪಗೆರೆ ತಿಮ್ಮರಾಜು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಸೌತ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು, ಡಾ.ನಾಗರಾಜು ವಿ.ಬೈರಿ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಡೇವಿಡ್ ಹಾಜರಿದ್ದರು.

ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾ ಶಾಲೆ ವಿದುಷಿ ಶೈಲಜಾ ನೃತ್ಯನಮನ ಸಲ್ಲಿಸಿದರು. ಗೀತನಮನದಲ್ಲಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ, ಡಾ.ಅಪ್ಪಗೆರೆ ತಿಮ್ಮರಾಜು, ಪ್ರತಿಭಾಂಜಲಿ ಡೇವಿಡ್, ಬಿ.ವಿ.ಪ್ರವೀಣ್, ಧನಂಜಯ, ಶ್ರೀಧರ್, ಮಂಗಳಾ, ಜೋಗಿ ಸುನೀತಾ. ಡಾ.ವರ್ಷಾಹೂಗಾರ್, ಹಂಸರೇಖಾ, ಅಮೂಲ್ಯ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ