ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್‌ನ ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತ ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಲು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಸಾಲು ಸಾಲು ಸುಳ್ಳುಗಳನ್ನು ಹೇಳಿದ್ದು, ಅವರ ನಡವಳಿಕೆ ಆಘಾತಕಾರಿಯಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.ಕಸಾಪ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತ ವಿಚಾರಣೆಗೆ ತನಿಖಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ನೋಂದಣಾಧಿಕಾರಿ 2025ರ ಜೂ.26 ಹಾಗೂ 30ರಂದು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಮಹೇಶ್ ಜೋಶಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಸರ್ಕಾರದ ಪರ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಹಾಜರಾಗಿ, ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಲು ಜೋಶಿ ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಯಾವೆಲ್ಲಾ ಸುಳ್ಳು ಹೇಳಿದರು ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದರಲ್ಲದೆ, ಪ್ರಕರಣದಲ್ಲಿ ಜೋಶಿ ಅವರನ್ನು ವೈಯುಕ್ತಿಕವಾಗಿ ಗುರಿ ಮಾಡಲಾಗಿಲ್ಲ, ತನಿಖೆ ನಡೆಯಬೇಕು ಎಂಬುದೇ ನಮ್ಮ ಉದ್ದೇಶ. ಏಕೆಂದರೆ, ವಿಷಯ ಬಹಳ ಗಂಭೀರವಾಗಿದೆ. ಅರ್ಜಿದಾರರ ನಡವಳಿಕೆ ಅನುಮಾನಾಸ್ಪದ ಹಾಗೂ ಆಘಾತಕಾರಿಯಾಗಿದೆ. ಹಾಗಾಗಿ, ತನಿಖೆ ಪೂರ್ಣಗೊಳಿಸಲು ನ್ಯಾಯಾಲಯವೇ ಕಾಲಮಿತಿ ನಿಗದಿಪಡಿಸಲಿ ಮತ್ತು ಮೇಲ್ವಿಚಾರಣೆ ನಡೆಸಲಿ ಎಂದು ನ್ಯಾಯಪೀಠಕ್ಕೆ ವಿವರಿಸಿದರು.ಆಗ ಜೋಶಿ ಪರ ವಕೀಲರು ಸ್ಪಷ್ಟನೆ ನೀಡಲು ಮುಂದಾದಾಗ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇಂತಹ ನಡವಳಿಕೆ ಕಾನೂನು ಮತ್ತು ನ್ಯಾಯಾಲಯದ ದುರ್ಬಳಕೆಯಾಗಿದೆ. ಪ್ರಕರಣದ ಕುರಿತ ತನಿಖೆ 30 ದಿನಗಳಲ್ಲಿ ಮುಗಿಸಬೇಕು. ಅಲ್ಲಿಯವರೆಗೆ ಯಾವುದೇ ಸಭೆ ನಡೆಯುವಂತಿಲ್ಲ. ತನಿಖೆಗೆ ಜೋಶಿ ಸಂಪೂರ್ಣವಾಗಿ ಸಹಕರಿಸಬೇಕು. ಈ ವಿಚಾರದಲ್ಲಿ ಯಾವುದೇ ರಿಯಾಯಿತಿ ಇಲ್ಲ. ಜೋಶಿ ತನಿಖೆಗೆ ಸಹಕರಿಸದಿದ್ದರೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಕಟುವಾಗಿ ಸೂಚಿಸಿ ವಿಚಾರಣೆಯನ್ನು ಡಿ.8ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅಡ್ವೋಕೇಟ್ ಜನರಲ್ ವಾದಿಸಿ, ತನಿಖೆಗೆ ಹಾಜರಾಗಲು ಸೂಚಿಸಿ ಜೋಶಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆಗ ಅವರು ಕುಟುಂಬದಲ್ಲಿ ಸಾವು ಸಂಭವಿಸಿದ್ದು, ಪ್ರಯಾಣ ಮಾಡಬೇಕಿದೆ. ಇದರಿಂದ ವಿಚಾರಣೆಗೆ ಹಾಜರಾಗಲು 15 ದಿನ ಕಾಲಾವಕಾಶ ನೀಡಲು ಕೋರಿದ್ದರು. ಆದರೆ, ಅವರು ಎಲ್ಲಿಗೂ ಪ್ರಯಾಣಿಸಿರಲಿಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರೈಲ್ವೆ ಟಿಕೆಟ್ ಬುಕ್ ಮಾಡಿ, ನಂತರ ಅದನ್ನು ರದ್ದು ಮಾಡಿಸಿದ್ದಾರೆ. ತಾನು ಪ್ರಯಾಣ ಮಾಡಿರುವುದಾಗಿ ತೋರಿಸಲೆಂದು ಟಿಕೆಟ್ ಕಾಯ್ದಿರಿಸಿದ್ದಾರೆ. ಟಿಕೆಟ್ ರದ್ದು ಮಾಡಿಸಿದ ವಿವರ ನೀಡದಂತೆ ರೈಲ್ವೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.ಅಲ್ಲದೆ, ಜೋಶಿ ಅವರು ವಾರಾಣಸಿಯಿಂದ ಲಖನೌಗೆ ವಿಮಾನ ಪ್ರಯಾಣ ಮಾಡಿದ ಅವಧಿ ಗಮನಿಸಿದರೆ, ಮನುಷ್ಯರಿಂದ ಅದು ಸಾಧ್ಯವೇ ಇಲ್ಲ. ಇನ್ನೂ ಪ್ರಯಾಣ ಮಾಡಬೇಕಾಗಿದೆ ಎಂದು ತಿಳಿಸಿದ್ದ ದಿನಗಳಲ್ಲಿ ಜೋಶಿ ಕಸಾಪ ಕಚೇರಿಗೆ ಬಂದು, ದೈನಂದಿನ ಜವಾಬ್ದಾರಿ ನಿರ್ವಹಿಸಿದ್ದಾರೆ. ಅದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿಯಿತು. ಸಿಸಿಟಿವಿ ದೃಶ್ಯಾವಳಿ ಕೊಡದಂತೆ ಕಸಾಪ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಕಾನೂನು ಮತ್ತು ನ್ಯಾಯಾಲಯವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಆರೋಪಿಸಿದರು.