ಬಾಳ ಉನ್ನತಿ ಅವನತಿಗಳಿಗೆ ಮನಸ್ಸು ಮೂಲ : ರಂಭಾಪುರಿ ಶ್ರೀ

KannadaprabhaNewsNetwork |  
Published : Nov 07, 2025, 02:00 AM IST
೦೫ಬಿಹೆಚ್‌ಆರ್ ೨: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಕಾರ್ತಿಕ ದೀಪೋತ್ಸವಕ್ಕೆ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಚಾಲನೆ ನೀಡಿದರು. ವಿವಿಧ ಶಾಖಾ ಮಠಗಳ ಶಿವಾಚಾರ್ಯರು, ಭಕ್ತರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದ ಮನುಷ್ಯನ ಬದುಕು ಛಿದ್ರಗೊಂಡಿದೆ. ಬಾಳಿನ ಉನ್ನತಿ ಅವನತಿಗಳಿಗೆ ಮನುಷ್ಯನ ಮನಸ್ಸೇ ಕಾರಣವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಕಾರ್ತಿಕ ದೀಪೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದ ಮನುಷ್ಯನ ಬದುಕು ಛಿದ್ರಗೊಂಡಿದೆ. ಬಾಳಿನ ಉನ್ನತಿ ಅವನತಿಗಳಿಗೆ ಮನುಷ್ಯನ ಮನಸ್ಸೇ ಕಾರಣವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಬುಧವಾರ ನಡೆದ ಪೌರ್ಣಿಮೆ ಕಾರ್ತಿಕ ದೀಪೋತ್ಸವದಲ್ಲಿ ಆಶೀರ್ವಚನ ನೀಡಿದರು. ಜೀವನ ಜೋಕಾಲಿ ಸುಖದಿಂದ ದು:ಖದತ್ತ ದು:ಖದಿಂದ ಸುಖದತ್ತ ಸದಾ ತೂಗುತ್ತಿರುತ್ತದೆ. ಪ್ರಪಂಚದಲ್ಲಿ ಭಯ, ಭೀತಿ, ಉದ್ವೇಗ, ಚಿಂತೆ, ಒತ್ತಡ ಎಲ್ಲರಿಗೂ ಇರುತ್ತದೆ. ಮನುಷ್ಯ ತನ್ನ ಬಾಳಿನಲ್ಲಿ ನೀತಿ ಸಂಹಿತೆ, ಸದಾಚಾರ, ಧ್ಯಾನ, ಜ್ಞಾನ ಅಳವಡಿಸಿಕೊಂಡು ಬಾಳಿದರೆ ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗುವು ದರಲ್ಲಿ ಯಾವುದೇ ಸಂದೇಹವಿಲ್ಲ. ಮನುಷ್ಯ ಆಸೆ ಕಳೆದುಕೊಂಡು ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು. ಕಷ್ಟ ಕಾಲದಲ್ಲಿ ಸಹಾಯ ಮಾಡಿದವರನ್ನು ಕಷ್ಟಕಾಲದಲ್ಲಿ ಕೈ ಬಿಡದೇ ಕಾಪಾಡುವವರನ್ನು ಕಷ್ಟಕ್ಕೆ ದೂಡಬಾರದು ಎಂದರು.

ಪ್ರತಿಯೊಂದು ಚಿಕ್ಕ ಪಯಣಕ್ಕೂ ಒಂದು ಮಾರ್ಗಸೂಚಿ ಇರುವಂತೆ ಬದುಕಿನ ಮಹಾಯಾತ್ರೆಗೆ ಧರ್ಮ ದಿಕ್ಸೂಚಿ ಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸುಖದ ಮೂಲ ಧರ್ಮಾಚರಣೆಯಲ್ಲಿದೆ ಎಂದು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ.

ದೀಪ ಬೆಳಕಿನ, ಕತ್ತಲು ಅಜ್ಞಾನದ ಸಂಕೇತ. ಕತ್ತಲೆ ಕಳೆದು ಬೆಳಕು ಮೂಡಿಸುವುದೇ ನಿಜವಾದ ಗುರುವಿನ ಧರ್ಮ. ದೀಪದಲ್ಲಿ ಬೆಳಕೂ ಇದೆ ಬೆಂಕಿಯೂ ಇದೆ. ಬೆಳಕಿನಿಂದ ಜೀವನ ವಿಕಾಸವಾದರೆ ಬೆಂಕಿಯಿಂದ ಬದುಕು ನಾಶಗೊಳ್ಳುತ್ತದೆ. ಅರಿವಿನ ಆಚರಣೆಯಲ್ಲಿ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ನ.27ರಂದು ನಡೆಯಲಿರುವ ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಲಿಂ. ಶ್ರೀಮದ್ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರು ಬಿಡುಗಡೆಗೊಳಿಸಿದರು.

ದೀಪೋತ್ಸವದಲ್ಲಿ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಚಿಕ್ಕಮಗಳೂರಿನ ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು, ಹನುಮಾಪುರ ಕಾಳಿಕಾದೇವಿ ಹಿರೇಮಠದ ಡಾ. ಸೋಮಶೇಖರ ಶಿವಾಚಾರ್ಯರು, ಬೀರೂರು ಬಾಳೆಹೊನ್ನೂರು ಶಾಖಾ ಮಠದ ರುದ್ರ ಮುನಿ ಶಿವಾಚಾರ್ಯರು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಹಾಗೂ ಗುಂಡಕನಾಳದ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.

ಕಾರ್ತಿಕ ದೀಪೋತ್ಸವ ಅಂಗವಾಗಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಭಕ್ತ ಸಮೂಹದ ಮಧ್ಯೆ ಸಂಭ್ರಮ ಸಡಗರದಿಂದ ನಡೆಯಿತು. ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ್, ಚಿಕ್ಕಮಗಳೂರು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಬೆಳಗೊಳ ಶಿವಶಂಕರ, ಆಲ್ದೂರಿನ ಇಳೇಖಾನ್ ಉಮೇಶ್, ಬಾಳೆಹೊನ್ನೂರಿನ ಎಂ.ಎಸ್.ಚನ್ನಕೇಶವ್ ಹಾಜರಿದ್ದರು.

೦೫ಬಿಹೆಚ್‌ಆರ್ ೨:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಕಾರ್ತಿಕ ದೀಪೋತ್ಸವಕ್ಕೆ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಚಾಲನೆ ನೀಡಿದರು. ವಿವಿಧ ಶಾಖಾ ಮಠಗಳ ಶಿವಾಚಾರ್ಯರು, ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ