ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದ್ದ ಡಾ. ಮಹಾಂತ ಶಿವಯೋಗಿ: ಎಸ್.ಎಫ್.ಎನ್. ಗಾಜಿಗೌಡ್ರ

KannadaprabhaNewsNetwork |  
Published : Aug 02, 2025, 12:00 AM IST
ಹಾವೇರಿಯ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನ- ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಶರಣರು- ಸಂತರು ನಮಗೆ ಒಳ್ಳೆಯ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ತಿಳಿದುಕೊಳ್ಳಬೇಕು.

ಹಾವೇರಿ: ವ್ಯಸನ ಮುಕ್ತ ಸಮಾಜದ ಕನಸು ಕಂಡ ಅಪರೂಪದ ಮಹಾನ್ ವ್ಯಕ್ತಿ ಡಾ. ಮಹಾಂತ ಶಿವಯೋಗಿಗಳು. ಅದಕ್ಕಾಗಿ ಮಾದಕ ವಸ್ತುಗಳ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮನವಿ ಮಾಡಿದರು.ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬಸವೇಶ್ವರ ಬಿಎಡ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನ- ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಣ, ದವಸಧಾನ್ಯಗಳನ್ನು ಜೋಳಿಗೆಗೆ ಹಾಕಿ ಎಂದು ಕೇಳುವ ಇತರರಿಗಿಂತ ಭಿನ್ನವಾದ ನಡೆಯಿಂದ ಧಾರ್ಮಿಕ, ಆಧ್ಯಾತ್ಮಿಕ ಶ್ರೇಯಸ್ಸಿನೊಂದಿಗೆ ಸ್ವಚ್ಛ ಸಮಾಜದ ಏಳಿಗೆಗಾಗಿ ಯುವಜನರಲ್ಲಿರುವ ದುಶ್ಚಟಗಳನ್ನು ಕೈಬಿಡುವಂತೆ ಜಾಗೃತಿ ಮೂಡಿಸಿ, ಜೋಳಿಗೆಯಲ್ಲಿ ದುಶ್ಚಟಗಳನ್ನು ದಾನ ಮಾಡಿ ಎಂದು ಮಹಾಂತ ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಆಂದೋಲನದ ರೀತಿಯಲ್ಲಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶರಣಮ್ಮ ಕಾರಿ ಮಾತನಾಡಿ, ಶರಣರು- ಸಂತರು ನಮಗೆ ಒಳ್ಳೆಯ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ತಿಳಿದುಕೊಳ್ಳಬೇಕು. ಯುವ ಸಮೂಹ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಹಾವೇರಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ. ಶೇಖರ ಭಜಂತ್ರಿ ಮಾತನಾಡಿ, ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕಾಲೇಜು ಉಪನ್ಯಾಸಕ ಮುಳಗುಂದ ಅವರು ಮಾದಕ ವಸ್ತು ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಮೈದೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಭಾರತಿ ಎಚ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂತನ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಇದ್ದರು.ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜಾಗೃತಿ ಜಾಥಾ...ಕಾರ್ಯಕ್ರಮಕ್ಕೂ ಮೊದಲು ಬಸವೇಶ್ವರ ಬಿಎಡ್ ಕಾಲೇಜಿನ ಆವರಣದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಭಾರತಿ ಎಚ್. ಅವರು ಚಾಲನೆ ನೀಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ, ಕಾಲೇಜು ಉಪನ್ಯಾಸಕ ಮುಳುಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರ.ದ.ಸ. ರಾಘವೇಂದ್ರ ಕುರಣೆ ಇತರರು ಉಪಸ್ಥಿತರಿದ್ದರು. ಗಾಂಧಿ ಭವನದವರೆಗೆ ಜಾಗೃತಿ ಜಾಥಾ ಜರುಗಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...