ಕುಶಾಲನಗರ ಒಳಚರಂಡಿ ಯೋಜನೆ ಮತ್ತು ಅಮೃತ್ 2 ನೀರು ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಬೆಂಗಳೂರಿನಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.
ಕನ್ನಡಪ್ರಭವಾರ್ತೆ ಕುಶಾಲನಗರ
ಕುಶಾಲನಗರ ಒಳಚರಂಡಿ ಯೋಜನೆ ಮತ್ತು ಅಮೃತ್ 2 ನೀರು ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಬೆಂಗಳೂರಿನಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಬೆಂಗಳೂರು ಶಾಸಕರ ಭವನದಲ್ಲಿ ಕುಶಾಲನಗರ ಪುರಸಭೆ ಅಧಿಕಾರಿಗಳು ಮತ್ತು ಒಳಚರಂಡಿ ಯೋಜನೆಯ ಅಧಿಕಾರಿಗಳು ಮತ್ತು ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಉಪಸ್ಥಿತಿಯಲ್ಲಿ ಶಾಸಕರು ಬಗ್ಗೆ ಮಾಹಿತಿ ಪಡೆದರು.ಕುಶಾಲನಗರ ಒಳಚರಂಡಿ ಯೋಜನೆ ಕಳೆದ 2014ರಲ್ಲಿ ಆರಂಭಗೊಂಡಿದ್ದು ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಸುಮಾರು 43 ಕೋಟಿ ರು. ವೆಚ್ಚದಲ್ಲಿ ಆರಂಭಗೊಂಡ ಯೋಜನೆಯ ಪ್ರಥಮ ಹಂತದ ಕಾಮಗಾರಿ ಅಂತ್ಯಗೊಂಡಿದ್ದು ಎರಡನೇ ಹಂತದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕುಶಾಲನಗರ ಮುಖ್ಯ ರಸ್ತೆಯಲ್ಲಿ ಸಂಪರ್ಕ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಗುಮ್ಮನಕೊಲ್ಲಿ ಬಳಿ ವೆಟ್ ವೆಲ್ ನಿರ್ಮಾಣ ಕಾಮಗಾರಿ ಬಾಕಿ ಉಳಿದಿದ್ದು ಸದ್ಯದಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಉಮೇಶ್ ಚಂದ್ರ ಮಾಹಿತಿ ಒದಗಿಸಿದರು.
ಸದ್ಯದಲ್ಲಿಯೇ ಮನೆಮನೆಗಳ ಸಂಪರ್ಕವನ್ನು ಕೊಳವೆಗಳಿಗೆ ನೀಡುವ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು. ಏ.15ಕ್ಕೆ ಕುಶಾಲನಗರ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೆ ಸಿದ್ಧಗೊಳಿಸುವಂತೆ ಶಾಸಕ ಡಾ ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಶಾಲನಗರ ಮತ್ತು ಪಿರಿಯಾಪಟ್ಟಣ ಭಾಗಗಳಿಗೆ ಅಮೃತ್ 2 ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಈಗಾಗಲೇ ಅನುಮೋದನೆಗೊಂಡಿರುವ ಟೆಂಡರ್ ಕಾಮಗಾರಿ ಪೂರ್ಣಗೊಂಡಿದೆ. ನದಿ ಭಾಗದಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಕ್ಟೋಬರ್ ಅಂತ್ಯದೊಳಗೆ ಅಮೃತ್ 2 ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಒಳಚರಂಡಿ ಯೋಜನೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.