ಸಹಕಾರಿ ಕ್ಷೇತ್ರ ಉತ್ತುಂಗಕ್ಕೆ ಏರಿಸಿದ ಡಾ.ಎಂಎನ್‌ಆರ್‌: ರಮಾನಾಥ ರೈ ಪ್ರಶಂಸೆ

KannadaprabhaNewsNetwork |  
Published : Mar 02, 2025, 01:15 AM IST
ಫೋಟೋ: ೧ಪಿಟಿಆರ್-ರಾಜೇಂದ್ರ ಕುಮಾರ್ ೧ಸಮಾರಂಭವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಫೋಟೋ: ೧ಪಿಟಿಆರ್-ರಾಜೇಂದ್ರ ಕುಮಾರ್ ೨ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎನ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ಶನಿವಾರ ಪುತ್ತೂರು ಬಂಟರ ಭವನದಲ್ಲಿ ಅಭಿವಂದನೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಸಹಕಾರಿ ಕ್ಷೇತ್ರವು ಕರಾವಳಿಯಲ್ಲಿ ಬಲಿಷ್ಠವಾಗಿದ್ದು, ಇದರ ಹಿಂದೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೊಡುಗೆಯಿದೆ. ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಮಾಡಿರುವ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತವ್ರವನ್ನು ಉತ್ತುಂಗಕ್ಕೆ ಏರಿಸಿದ ಸಾಧಕರಾಗಿದ್ದಾರೆ. ೩ ದಶಕಗಳಿಂದ ಬ್ಯಾಂಕ್‌ನ ಚುಕ್ಕಾಣಿ ಹಿಡಿದಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಬ್ಯಾಂಕ್‌ನ ಕೀರ್ತಿ ಎತ್ತರಕ್ಕೇರಿಸಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎನ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ಶನಿವಾರ ಪುತ್ತೂರು ಬಂಟರ ಭವನದಲ್ಲಿ ನಡೆದ ಅಭಿವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಭಿನಂದನಾ ಭಾಷಣ ಮಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಅವಿಭಜಿತ ದ.ಕ. ಜಿಲ್ಲೆಯಲ್ಲಿ ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಸ್ಥಾನ ಪಡೆದ ಮೊದಲ ವ್ಯಕ್ತಿ ಡಾ. ರಾಜೇಂದ್ರ ಕುಮಾರ್ ಆಗಿದ್ದಾರೆ. ಅವರೊಬ್ಬ ರಾಷ್ಟ್ರೀಯ ಸಾಧನಾ ವ್ಯಕ್ತಿಯಾಗಿದ್ದಾರೆ ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶಾಮ್ ಭಟ್, ಮಾಸ್ ಲಿಮಿಟೆಡ್ ಅಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿದರು.

ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ೩ ತಾಲೂಕುಗಳ ಸಹಕಾರಿ ಬಂಧುಗಳ ಪರವಾಗಿ ಸನ್ಮಾನಿಸಲಾಯಿತು. ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಆಯ್ಕೆಯಾದ ವಿಷ್ಣು ಭಟ್ ಮೂಲೆತೋಟ, ಮಂಜುನಾಥ ಎನ್.ಎಸ್., ಸತೀಶ್ ಕಾಶಿಪಟ್ಣ, ಪ್ರವೀಣ್ ಗಿಲ್ಬರ್ಟ್ ಪಿಂಟೋ ಅವರನ್ನು ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಕಾಯಿದೆಗೆ ತಿದ್ದುಪಡಿ ತರುವ ವಿಚಾರ ಸದ್ದು ಮಾಡುತ್ತಲೇ ಇದೆ. ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ. ಸಹಕಾರಿ ಬ್ಯಾಂಕ್‌ಗಳಿಗೆ ಎಸ್.ಸಿ., ಎಸ್.ಟಿ. ಮತ್ತು ಮಹಿಳಾ ಕ್ಷೇತ್ರದ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡುವ ವಿಚಾರವಿದೆಯಂತೆ. ನಾಮನಿರ್ದೇಶಿತರೂ ಅಧ್ಯಕ್ಷರಾಗಬಹುದಾದರೆ ಚುನಾಯಿತರ ಕಥೆ ಏನಾದೀತು. ಇದಕ್ಕೆ ನನ್ನ ವಿರೋಧವಿದೆ ಎಂದರು.

ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಬಾರದು ಎಂದು ಪ್ರತಿಪಾದಿಸುವವನು ನಾನು. ನಾವು ಒಳ್ಳೆಯ ಕೆಲಸ ಮಾಡುವಾಗ ಧೈರ್ಯ ಕೆಡಬಾರದು. ಅಪಪ್ರಚಾರ ಬಂದೇ ಬರುತ್ತದೆ. ಅದೆಲ್ಲವನ್ನೂ ಸಹಿಸಿಕೊಂಡು ಸಾಗಬೇಕು ಎಂದು ನುಡಿದರು.

೩೧ ವರ್ಷಗಳ ಅಧ್ಯಕ್ಷೀಯ ಅವಧಿಯಲ್ಲಿ ನಾನು ಯಾವತ್ತೂ ರಾಜಕೀಯ ಮಾಡಿಲ್ಲ. ಸಹಕಾರಿ ರಂಗದಲ್ಲಿ ರಾಜಕೀಯ ಬರಬಾರದು ಎಂದೇ ಪ್ರತಿಪಾದಿಸುತ್ತಾ ಬಂದಿದ್ದೇನೆ ಎಂದು ರಾಜೇಂದ್ರ ಕುಮಾರ್‌ ನುಡಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ದಕ್ಷಿಣಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಎಸ್‌ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಮತ್ತಿತರರು ಇದ್ದರು.

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''