ಶ್ರೀಶೈಲ ಮಠದ
ರಾಜ್ಯ ಹಾಗೂ ದೇಶದ ಅತಿದೊಡ್ಡ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆಎಲ್‌ಇ ಸಂಸ್ಥೆಯಲ್ಲಿ ರಾಜಕೀಯ-ಆಡಳಿತಾತ್ಮಕ ವಲಯವನ್ನೇ ಕದಡುವ ಮಹತ್ವದ ಬೆಳವಣಿಗೆ ನಡೆದಿದೆ. ಸುದೀರ್ಘ 40 ವರ್ಷಗಳ ಕಾಲ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಪ್ರಭಾಕರ ಕೋರೆ ಅವರು ನಿರ್ದೇಶಕ ಮಂಡಳಿ ಚುನಾವಣೆಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ದಿಢೀರನೆ ವಾಪಸ್ ಪಡೆದು, ಸಂಸ್ಥೆಯ ಆಡಳಿತದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.
ಈ ನಿರ್ಧಾರವು ಸೋಲು, ಒತ್ತಡ ಅಥವಾ ಅನಿವಾರ್ಯತೆಯಿಂದ ಬಂದಿದ್ದಲ್ಲ. ಮುಂದುವರಿಯಲು ಎಲ್ಲ ಅವಕಾಶಗಳಿದ್ದರೂ ಕೋರೆ ಅವರು ಹಿಂದೆ ಸರಿದಿರುವ ಈ ಬೆಳವಣಿಗೆ ಅಚ್ಚರಿಯ ಜತೆಗೆ ಐತಿಹಾಸಿಕವಾಗಿಸಿದೆ. 1984ರಲ್ಲಿ ನಿರ್ದೇಶಕರಾಗಿ ಕೆಎಲ್‌ಇಗೆ ಕಾಲಿಟ್ಟ ಡಾ.ಪ್ರಭಾಕರ ಕೋರೆ ಅವರು, ನಂತರ ಕಾರ್ಯಾಧ್ಯಕ್ಷರಾಗಿ ಸಂಸ್ಥೆಯ ಹೊಣೆ ಹೊತ್ತರು. ಅವರು ಅಧಿಕಾರ ವಹಿಸಿಕೊಂಡಾಗ ಕೇವಲ 38 ಅಂಗ ಸಂಸ್ಥೆಗಳಿದ್ದ ಕೆಎಲ್‌ಇ, ಇಂದು 316 ಅಂಗ ಸಂಸ್ಥೆಗಳನ್ನೊಳಗೊಂಡ ಶೈಕ್ಷಣಿಕ ಮಹಾಸಂಸ್ಥೆಯಾಗಿ ಬೆಳೆದಿದೆ.ಬೆಳಗಾವಿಯಿಂದ ಆರಂಭವಾದ ಕೆಎಲ್‌ಇ ಜಾಲ ಇಂದು ಮಹಾರಾಷ್ಟ್ರ, ದೆಹಲಿ ಹಾಗೂ ದುಬೈವರೆಗೂ ವಿಸ್ತರಿಸಿದೆ. ಇದು ಅವರ ದೂರದೃಷ್ಟಿ ಮತ್ತು ಕಟ್ಟುನಿಟ್ಟಿನ ಆಡಳಿತದ ಫಲವಾಗಿದೆ ಎಂದು ಶಿಕ್ಷಣ ವಲಯದ ತಜ್ಞರು ವಿಶ್ಲೇಷಿಸುತ್ತಾರೆ.
ಕಾಣಿಸುತ್ತದೆಯೇ ನಾಯಕತ್ವದ ಕೊರತೆ?:ಡಾ.ಪ್ರಭಾಕರ ಕೋರೆ ಅವರು ಕೇವಲ ಹುದ್ದೆ ಹಿಡಿದ ನಾಯಕರಲ್ಲ. ಅವರು ಸಂಸ್ಥೆಯ ಬೆಳವಣಿಗೆಗೆ ಉತ್ತಮ ನಿರ್ಧಾರ ತೆಗೆದುಕೊಂಡವರು, ವ್ಯವಸ್ಥೆಯ ದೋಷಗಳನ್ನು ತಿದ್ದಿದವರು, ಜಡಗೊಂಡ ಆಡಳಿತಕ್ಕೆ ಚೈತನ್ಯ ತುಂಬಿದವರು. ಅವರ ಪುತ್ರ ಅಮಿತ್ ಕೋರೆ, ಪುತ್ರಿ ಪ್ರೀತಿ ದೊಡವಾಡ ನೂತನ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ವಾಸ್ತವ ಇದ್ದರೂ, ಸ್ವತಃ ಮುಂದುವರಿಯಲು ಅವಕಾಶಗಳಿದ್ದರೂ ಹಿಂದೆ ಸರಿದಿರುವ ಡಾ.ಕೋರೆ ಅವರ ಈ ನಿರ್ಧಾರಕ್ಕೆ ವಿಶಿಷ್ಟ ತೂಕ ನೀಡಿದೆ. ಅವರ ನಿರ್ಗಮನದಿಂದ ಸ್ಥಾನ ಖಾಲಿಯಾಗಿದ್ದರೂ, ನಾಯಕತ್ವದ ಕೊರತೆ ತಕ್ಷಣವೇ ಕಾಣಿಸಿಕೊಳ್ಳಲಿದೆ ಎಂಬ ಅಭಿಪ್ರಾಯಗಳು ಸಂಸ್ಥೆಯೊಳಗೆ ಕೇಳಿಬರುತ್ತಿವೆ.
ಭವಿಷ್ಯದ ಆಡಳಿತಕ್ಕೆ ಸವಾಲು:ಈಗ ಕೆಎಲ್‌ಇ ಸಂಸ್ಥೆಯ ಮುಂದಿರುವ ಸವಾಲು ಸ್ಪಷ್ಟವಾಗಿದೆ. ಸ್ಥಾನಗಳನ್ನು ತುಂಬುವುದು ಸುಲಭ. ಆದರೆ ಅನುಭವ, ದೃಢ ನಿರ್ಧಾರ ಮತ್ತು ಜವಾಬ್ದಾರಿಯುತ ನಾಯಕತ್ವವನ್ನು ತುಂಬುವುದು ಕಷ್ಟ. ಮುಂದಿನ ಆಡಳಿತ ಮಂಡಳಿ ವ್ಯಕ್ತಿ ಪೂಜೆಯಲ್ಲದೆ, ಸಂಸ್ಥಾನ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಆಡಳಿತಕ್ಕೆ ಆದ್ಯತೆ ನೀಡಬೇಕಾಗಿದೆ. ಡಾ.ಪ್ರಭಾಕರ ಕೋರೆ ಅವರ ನಿರ್ಗಮನವನ್ನು ನಿವೃತ್ತಿಯಂತೆ ಮಾತ್ರ ನೋಡಲಾಗುವುದಿಲ್ಲ. ಇದು ಅಧಿಕಾರಕ್ಕಿಂತ ಸಂಸ್ಥೆಯ ಹಿತ ದೊಡ್ಡದು ಎಂಬ ಸ್ಪಷ್ಟ ಸಂದೇಶವನ್ನೂ ನೀಡುತ್ತದೆ. ಸಾರ್ವಜನಿಕ ಜೀವನದಲ್ಲಿ ಇಂತಹ ಉದಾಹರಣೆಗಳು ವಿರಳವಾಗುತ್ತಿರುವ ಹೊತ್ತಿನಲ್ಲಿ, ಕೋರೆ ಅವರ ಈ ನಡೆ ಐತಿಹಾಸಿಕ ಮತ್ತು ಅನುಕರಣೀಯವಾದಂತಿದೆ.
------ಬಾಕ್ಸ್
ಕೆಎಲ್‌ಇಗೆ ಮಹಿಳಾ ಸಾರಥ್ಯ?ಇನ್ನು ಕೆಎಲ್‌ಇ ಸಂಸ್ಥೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನಿರ್ಮಾಣವಾಗುವ ಸಾಧ್ಯತೆ ಇದೆ. ಡಾ.ಪ್ರಭಾಕರ ಕೋರೆ ಅವರ ಪುತ್ರಿ ಡಾ.ಪ್ರೀತಿ ದೊಡವಾಡ ಅವರು ಸಂಸ್ಥೆಯ ಮೊದಲ ಮಹಿಳಾ ಕಾರ್ಯಾಧ್ಯಕ್ಷೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಚರ್ಚೆಯಾಗುತ್ತಿದೆ. ಈಗಾಗಲೇ ಅವರು ನಿರ್ದೇಶಕಿ ಹುದ್ದೆಗೆ ಅವಿರೋಧ ಆಯ್ಕೆಯಾಗಿದ್ದಾರೆ. ಮಹಿಳಾ ನಾಯಕತ್ವದೊಂದಿಗೆ ಕೆಎಲ್‌ಇ ಸಂಸ್ಥೆ ಹೊಸ ಯುಗದತ್ತ ಸಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಹೊಸ ಆಡಳಿತ ಮಂಡಳಿಯು ತೆಗೆದುಕೊಳ್ಳುವ ನಿರ್ಧಾರಗಳು ಸಂಸ್ಥೆಯ ಭವಿಷ್ಯವನ್ನು ನಿರ್ಧರಿಸಲಿವೆ.
-------ಬಾಕ್ಸ್
14 ನಿರ್ದೇಶಕರ ಅವಿರೋಧ ಆಯ್ಕೆಕೆಎಲ್ಇ ಸಂಸ್ಥೆಯ 14 ನಿರ್ದೇಶಕರ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದೆ. ನೂತನ ಅಧ್ಯಕ್ಷರಾಗಿ ಬೈಲಹೊಂಗಲ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಶಿವಲಿಂಗಪ್ಪ ತಟವಟಿ ಮರು ಆಯ್ಕೆಯಾಗಿದ್ದಾರೆ. ಅದರಂತೆ ಆಡಳಿತ ಮಂಡಳಿಯ ಸದಸ್ಯರಾಗಿ ಅಮಿತ ಪ್ರಭಾಕರ ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಪ್ರೀತಿ ಕರಣ ದೊಡವಾಡ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಮಲ್ಲಿಕಾರ್ಜುನ ಚನಬಸಪ್ಪ ಕೊಳ್ಳಿ, ವಿಜಯ ಶ್ರೀಶೈಲಪ್ಪ ಮೆಟಗುಡ್ಡ, ಜಯಾನಂದ ಉರ್ಫ್ ರಾಜು ಮಹಾದೇವಪ್ಪ ಮುನವಳ್ಳಿ, ಮಂಜುನಾಥ ಶಂಕರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರಣಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ ಹಾಗೂ ಅನೀಲ ವಿಜಯಬಸಪ್ಪ ಪಟ್ಟೇದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ಎಸ್.ಎಸ್.ಜಲಾಲಪುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.