ಡಾ.ರಾಜ್‌, ಡಾ.ವಿಷ್ಣು ಎಂದರೇ ಆದರ್ಶ, ಸಂಸ್ಕಾರ, ಸಂಸ್ಕೃತಿ: ವೀರಕಪುತ್ರ ಶ್ರೀನಿವಾಸ್‌ ಬಣ್ಣ

KannadaprabhaNewsNetwork |  
Published : Oct 16, 2025, 02:00 AM IST
8 | Kannada Prabha

ಸಾರಾಂಶ

ಕನ್ನಡನಾಡಿನಲ್ಲಿ ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌ ಎಂದರೇ ಅಭಿಮಾನಿಗಳ ನಡುವೆ ಕಾಳಗವೇ. ಹೀಗಿರುವಾಗ ಡಾ.ರಾಜ್‌ಕುಮಾರ್‌ ಕಲಾ ಗ್ರೂಪ್‌ನಿಂದ ಡಾ.ವಿಷ್ಣುವರ್ಧನ್‌ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಸಂಗೀತ ಕಾರ್ಯಕ್ರಮ ಏರ್ಪಡಿಸಿರುವುದು ಸೌಹಾರ್ದತೆಯ ಸಂಕೇತ.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌ ಎಂದರೇ ಆದರ್ಶ, ಸಂಸ್ಕಾರ, ಸಂಸ್ಕೃತಿ ಎಂದು ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಬಣ್ಣಿಸಿದರು.

ಡಾ. ರಾಜ್‌ ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ‘ಘರ್ಜನೆ’ ಶೀರ್ಷಿಕೆಯಲ್ಲಿ ಬುಧವಾರ ಆಯೋಜಿಸಿದ್ದ ಡಾ.ವಿಷ್ಣುವರ್ಧನ್ ಹಿಟ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದ ನೆಲದಲ್ಲಿ ಯಾರನ್ನಾದರೂ ಆದರ್ಶ ವ್ಯಕ್ತಿಗಳು ಎಂದು ಮಕ್ಕಳಿಗೆ ತಿಳಿಸಬೇಕಾದರೆ ಈ ಇಬ್ಬರು ಹೆಸರುಗಳು ಬರುತ್ತವೆ,. ಸೂರ್ಯ- ಚಂದ್ರ ಇರುವವರೆಗೂ ಇವರ ಹೆಸರು ಅಜರಾಮರವಾಗಿರುತ್ತದೆ. ಇವರಿಬ್ಬರೂ ನಿಜವಾದ ಕರ್ನಾಟಕ ರತ್ನಗಳು ಎಂದರು.

ವಿಷ್ಣುವರ್ಧನ್‌ ಅದ್ವಿತೀಯರು. ಆದರೆ ಯಾಕೋ ಏನೋ ಎಲ್ಲದರಲ್ಲೂ ದ್ವಿತೀಯರಂತೆ ಇದ್ದರು. ಅವರು 2009 ರಲ್ಲಿಯೇ ನಿಧನರಾದರು. ಇಷ್ಟು ವರ್ಷಗಳ ನಂತರ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದೆ ಎಂದರು.

ಕನ್ನಡನಾಡಿನಲ್ಲಿ ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌ ಎಂದರೇ ಅಭಿಮಾನಿಗಳ ನಡುವೆ ಕಾಳಗವೇ. ಹೀಗಿರುವಾಗ ಡಾ.ರಾಜ್‌ಕುಮಾರ್‌ ಕಲಾ ಗ್ರೂಪ್‌ನಿಂದ ಡಾ.ವಿಷ್ಣುವರ್ಧನ್‌ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಸಂಗೀತ ಕಾರ್ಯಕ್ರಮ ಏರ್ಪಡಿಸಿರುವುದು ಸೌಹಾರ್ದತೆಯ ಸಂಕೇತ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್‌ ಮಾತನಾಡಿ, ವಿಷ್ಣುವರ್ಧನ್‌ ಅವರ ಕಟ್ಟಾ ಅಭಿಮಾನಿಯಾದ ತಾವು ಎಪ್ಪತ್ತರ ದಶಕದಲ್ಲಿಯೇ ಕಿಲಾಡಿ ಕಿಟ್ಟು ಹಾಗೂ ಕಳ್ಳಕುಳ್ಳ ಚಿತ್ರಗಳನ್ನು ನಿರ್ಮಿಸಿದ್ದೆ. ಆಗ ವಿಷ್ಣುವರ್ಧನ್‌ ಅವರಿಗೆ 31 ಸಾವಿರ ರು, ರಜನಿಕಾಂತ್‌ ಅವರಿಗೆ 13 ,ಸಾವಿರ ರು. ಸಂಭಾವನೆ ನೀಡಿದ್ದಾಗಿ ಸ್ಮರಿಸಿದರು.

ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ನಾನು ಮೊದಲಿಗೆ ಡಾ.ರಾಜ್‌ಕುಮಾರ್‌, ನಂತರ ಡಾ.ವಿಷ್ಣುವರ್ಧನ್‌ ಅವರ ಅಭಿಮಾನಿ. ಅವರಿಬ್ಬರ ನಟನೆಯ ಚಿತ್ರಗಳು ಸಮಾಜಕ್ಕೆ ಬೇಕಾದ ಸಂದೇಶವನ್ನು ನೀಡುತ್ತಿದ್ದವು ಎಂದರು.

ಬೆಂಗಳೂರಿನಲ್ಲಿ ಮೊದಲಿಗೆ ಡಾ.ರಾಜ್‌ ಕುಮಾರ್‌ ಅಭಿಮಾನಿಗಳ ಸಂಘ ಆರಂಭವಾಗಿದ್ದೇ ಹೋಟೆಲ್‌ ಕಾರ್ಮಿಕರಿಂದ ಎಂದರು.

ಡಾ.ರಾಜ್‌ ಕುಮಾರ್‌ ಮ್ಯೂಸಿಕಲ್‌ ಗ್ರೂಪಿನ ಸಂಸ್ಥಾಪಕ ಮೈಸೂರು ಜಯರಾಂ ಮಾತನಾಡಿ, ಸೌಹಾರ್ದತೆ ಸಾರಲು ತಮ್ಮ ಸಂಸ್ಥೆಯಿಂದ ವಿಷ್ಣು ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಬಾರಿ ಲೈವ್‌ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದೆ ಎಂದರು.

ವೀರಕಪುತ್ರ ಶ್ರೀನಿವಾಸ್‌ ಅವರು ವಿಷ್ಣುವರ್ಧನ್‌ ಅಭಿಮಾನಿಗಳ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಇದರಿಂದಾಗಿಯೇ ವಿಷ್ಣುವರ್ಧನ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರೆತಿದೆ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಡಾ.ರಾಜ್‌ಕುಮಾರ್‌ ಮ್ಯೂಸಿಕಲ್‌ ಗ್ರೂಪಿನ ಗೌರವಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸುಧೀಂದ್ರ, ಸುರೇಶ್, ಅನಿತಾ ಮೊದಲಾದವರು ಇದ್ದರು.

ನಂತರ ಡಾ.ವಿಷ್ಣುವರ್ಧನ್‌ ಅವರು ನಟಿಸಿರುವ ಚಿತ್ರಗಳಿಂದ ಆಯ್ದ ಪ್ರಸಿದ್ಧ ಹಾಗೂ ವಿಶೇಷ ಗೀತೆಗಳ ಕರೋಕೆ ಗಾಯನ ಕಾರ್ಯಕ್ರಮವನ್ನು ಮೈಸೂರು ಜಯರಾಂ ಮತ್ತು ತಂಡದ ಸರ್ವಮಂಗಳಾ, ತೇಜಸ್ವಿನಿ, ಪಲ್ಲವಿ, ದಿವ್ಯಾ, ವಕೀಲ ಶೇಖರ್‌, ರಾಮದಾಸ್‌, ಪಾಪಣ್ಣ, ರವಿಕುಮಾರ್‌, ಚಂದ್ರಶೇಖರ್‌, ಶ್ಯಾಮಸುಂದರ್‌, ನಂಜುಂಡಯ್ಯ, ಶಂಕರ್‌ ಅವರು ನಡೆಸಿಕೊಟ್ಟರು. ಎಡೆಯೂರು ಸಮೀವುಲ್ಲಾ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ