ಸೈನಿಕರ ಅಭಿವೃದ್ಧಿಗೆ 3 ಕೋಟಿ ರು: ಡಾ.ರಾಜೇಂದ್ರ ಕುಮಾರ್‌ ಘೋಷಣೆ

KannadaprabhaNewsNetwork | Published : May 11, 2025 11:46 PM
Follow Us

ಸಾರಾಂಶ

ದೇಶ ಕಾಯುವ ಸೈನಿಕರ ಅಭಿವೃದ್ಧಿಗಾಗಿ 3 ಕೋಟಿ ರು. ನೀಡುವುದಾಗಿ ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಸಂಸ್ಥಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶ ಕಾಯುವ ಸೈನಿಕರ ಅಭಿವೃದ್ಧಿಗಾಗಿ 3 ಕೋಟಿ ರು. ನೀಡುವುದಾಗಿ ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಸಂಸ್ಥಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಘೋಷಿಸಿದ್ದಾರೆ.

ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ’ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ದೇಶದ ಸೈನಿಕರು ಗಡಿ ಪ್ರದೇಶದಲ್ಲಿ ವೀರಾವೇಶದಿಂದ ಹೋರಾಡುತ್ತಿದ್ದಾರೆ. ಅವರಿಗೆ ನೈತಿಕ ಶಕ್ತಿ ತುಂಬಲು ಪ್ರಾರ್ಥನೆ ನಡೆಸುವುದರೊಂದಿಗೆ ಸೈನಿಕರ ಅಭಿವೃದ್ಧಿಗಾಗಿ 3 ಕೋಟಿ ರು. ನೀಡಲಾಗುವುದು ಎಂದರು. ಇದೇ ವೇಳೆ ಸೈನಿಕರಿಗೆ ಬೆಂಬಲ ನೀಡಲು ‘ಭಾರತ್‌ ಮಾತಾ ಕೀ..’ ಘೋಷಣೆ ಕೂಗಲಾಯಿತು.

ನವೋದಯ ಸಂಘ ವಿಸ್ತರಣೆ:

ಬಳಿಕ ಮಾತು ಮುಂದುವರಿಸಿದ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌, ನವೋದಯ ಸ್ವಸಹಾಯ ಗುಂಪುಗಳ ಮೂಲಕ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರೂ ಬೆಳೆಯುವಂತಾಗಿದೆ. ಈ ಮೂಲಕ ಮಹಿಳಾ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಇನ್ನಷ್ಟು ಸ್ವಾವಲಂಬಿಯಾಗಿಸುವ ಕೆಲಸ ಮಾಡಲಿದ್ದೇವೆ. ಮಾತ್ರವಲ್ಲದೆ ಇನ್ನೂ ಒಂದೆರಡು ಜಿಲ್ಲೆಗಳಿಗೆ ನವೋದಯ ಸಂಘಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

30 ವರ್ಷಗಳ ಹಿಂದೆ ನಾನು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾದಾಗ ಮಹಿಳೆಯರು ಮನೆಯಿಂದ ಹೊರಗೆ ಬರುವ ಪರಿಸ್ಥಿತಿ ಇರಲಿಲ್ಲ. ಮಹಿಳೆಯರೂ ಪುರುಷರಂತೆ ಸ್ವಾವಲಂಬಿ ಜೀವನ ಸಾಗಿಸುವಂತಾಗಬೇಕು ಎಂಬ ನಿಶ್ಚಯ ಮಾಡಿ 25 ವರ್ಷಗಳ ಹಿಂದೆ ನವೋದಯ ಸ್ವಸಹಾಯ ಗುಂಪುಗಳ ರಚನೆ ಮಾಡಿದೆ. ಆಗಿನ ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ನಾನು ಸೇರಿಕೊಂಡು ಕಾರ್ಕಳದಲ್ಲಿ ಇದಕ್ಕೆ ಚಾಲನೆ ನೀಡಿದ್ದೆವು. ಆರಂಭದಲ್ಲಿ ಎರಡು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನವೋದಯ ಸಂಘಗಳು ಇಂದು 9 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

ಡಾ.ಎಂಎನ್‌ಆರ್‌ ದಂಪತಿಗೆ ಸನ್ಮಾನ: ಇದೇ ಸಂದರ್ಭ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಮತ್ತು ಅರುಣಾ ರಾಜೇಂದ್ರ ಕುಮಾರ್‌ ದಂಪತಿಯನ್ನು ಬೃಹತ್‌ ಹಾರ, ಸ್ಮರಣಿಕೆ ನೀಡಿ ಅತಿಥಿಗಳು ಸನ್ಮಾನ ಮಾಡಿದರು.