ಮಂಗಳೂರು: ನವೆಂಬರ್ 21 ರಂದು ಮಂಗಳೂರಿನ ಮಾರಿಯಮ್ಮನ ಸಾನಿಧ್ಯದಲ್ಲಿ ತಾಯಿಯ ದಿವ್ಯ ಆಶೀರ್ವಾದದಿಂದ ‘ಎಂ.ಎನ್.ಆರ್. ಪ್ರೊಡಕ್ಷನ್ಸ್’ ಲಾಂಛನದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಾರಥ್ಯದಲ್ಲಿ ಮುಹೂರ್ತಗೊಂಡಿರುವ ‘ವಾದಿರಾಜ ವಾಲಗ ಮಂಡಳಿ’ (ವಿವಿಎಮ್) ಕನ್ನಡ ಚಲನಚಿತ್ರ ಡಿಸೆಂಬರ್- 3, 2025 ರಿಂದ ನಿರಂತರ ಶೂಟಿಂಗ್ ನಡೆಸಿ ತನ್ನ ಮೊದಲ ಚಿತ್ರೀಕರಣವನ್ನು ಯಶಸ್ವಿಯಾಗಿ ನಡೆಸಿದೆ. ಬ್ರಹ್ಮಾವರದ ಹಂದಾಡಿ ತೆಂಕು ಮನೆಯಲ್ಲಿ 20 ದಿನಗಳ ಕಾಲ ಹಾಗೂ ಬಜ್ಪೆ ಕೊಳಂಬೆಯಲ್ಲಿ 8 ದಿನ ಮತ್ತು ಮೂಲ್ಕಿ ಪರಿಸರದಲ್ಲಿ 14 ದಿನಗಳ ಕಾಲ ಶೂಟಿಂಗ್ ನಡೆಸಿದೆ.ಅಪ್ಪಟ ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ವಿವಿಎಮ್ ಕನ್ನಡ ಸಿನೆಮಾದ ಕೊನೆಯ ಹಂತದ ಚಿತ್ರೀಕರಣ ಫೆಬ್ರವರಿ ಕೊನೆಯ ವಾರದಲ್ಲಿ ನಡೆಯಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ಮೇ 2026ಕ್ಕೆ ಅದ್ದೂರಿಯಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.
ಕರಾವಳಿಯ ಆಯ್ದ ಕಲಾವಿದರ ಸಮ್ಮಿಲನ ಈ ಚಿತ್ರದಲ್ಲಿದೆ. ಮಜಾ ಟಾಕೀಸ್ ಗುಂಡು ಮಾಮ ಖ್ಯಾತಿಯ ನವೀನ್ ಡಿ ಪಡೀಲ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡ ಚಲನಚಿತ್ರರಂಗದಲ್ಲಿ ಪ್ರಸ್ತುತ ಬಹುಬೇಡಿಕೆಯ ನಟರಾದ ಕಾಂತಾರ, ಸು ಫ್ರಮ್ ಸೊ ಮುಂತಾದ ಪ್ರಸಿದ್ಧ ಚಲನಚಿತ್ರಗಳ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಪುಷ್ಪರಾಜ್ ಬೊಳ್ಳಾರ್ ಮುಂತಾದವರು ಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪ್ರಕಾಶ್ ತುಮಿನಾಡು ಇವರ ನೂರನೇ ಚಿತ್ರವು ಇದಾಗಿದೆ. ಡೇರ್ ಡೆವಿಲ್ ಮುಸ್ತಫಾದ ಶೋಭರಾಜ್ ಪಾವೂರು, ಅರ್ಜುನ್ ರೆಡ್ಡಿ, ವೀರಮದಕರಿ ಮುಂತಾದ ಸಿನೆಮಾದಲ್ಲಿ ಖಳ ಪಾತ್ರ ಮಾಡಿದ ಗೋಪಿನಾಥ್ ಭಟ್, ನಿತಿನ್ ತುಂಬೆ, ವಿನಾಯಕ ಜೆಪ್ಪು, ಲಕ್ಷ್ಮಣ ಕುಮಾರ್ ಮಲ್ಲೂರು, ಯತೀಶ್ ಬೈಕಂಪಾಡಿ, ಗೋಪಾಲ ಶೆಟ್ಟಿ, ರಂಜನ್ ಬೋಳೂರು ಮಾತ್ರವಲ್ಲದೆ ಹಲವಾರು ಹೊಸ ಪ್ರತಿಭೆಗಳನ್ನು ಈ ಸಿನೆಮಾದಲ್ಲಿ ಪರಿಚಯಿಸಲಾಗಿದೆ. ತೆಲುಗು ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ಅರ್ಜುನ್ ವೇದಾಂತ್ ಮತ್ತು ಕರಾವಳಿಯ ಪ್ರತಿಭೆ ಅಥರ್ವ ಪ್ರಕಾಶ್ ನಾಯಕ ನಟರಾಗಿ ಹಾಗೂ ವೇನ್ಯ ರೈ ಮತ್ತು ತನ್ವಿ ರಾವ್ ನಾಯಕಿಯರಾಗಿ ಮಿಂಚಿದ್ದಾರೆ.ತಮಿಳು ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳಲ್ಲಿ ಕೆಮರಾಮಾನ್ ಆಗಿ ಪ್ರಸಿದ್ದಿ ಪಡೆದ ಚಂದ್ರಶೇಖರನ್ ಅವರ ಕ್ಯಾಮರಾ ಕೈಚಳಕ ಈ ಚಿತ್ರದಲ್ಲಿ ಕಾಣಬಹುದು. ಕನ್ನಡದ ಪ್ರಮುಖ ಸಂಗೀತ ನಿರ್ದೇಶಕ ಮತ್ತು ಪ್ರತಿಭಾವಂತ ಸಂಯೋಜಕ ಮಣಿಕಾಂತ್ ಕದ್ರಿಯವರು ಚಿತ್ರಕ್ಕೆ ಸಂಗೀತ ನೀಡಿದ್ದು ಚಿತ್ರದಲ್ಲಿ ಐದು ಹಾಡುಗಳಿವೆ. ನಿತಿನ್ ಶೆಟ್ಟಿ ಸಂಕಲನದಲ್ಲಿ ಮತ್ತು ವಿನಾಯಕ ಆಚಾರ್ಯ ನೃತ್ಯ ನಿರ್ದೇಶಕರಾಗಿ ಸಹಕರಿಸಿದ್ದಾರೆ.ನಿರ್ಮಾಪಕ ಡಾ.ಎಂ.ಎನ್.ಆರ್ ಮಾತು
ಚೊಚ್ಚಲ ನಿರ್ದೇಶನಕ್ಕೆ ಚಿತ್ರರಂಗದ ದಿಗ್ಗಜರ ಹಾರೈಕೆ:
‘ವರಾಹರೂಪಂ’, ಗೊತ್ತಿಲ್ಲ ಶಿವನೆ, ಮುಂತಾದ ಹಾಡುಗಳನ್ನು ಬರೆದು ಪ್ರಸಿದ್ಧರಾದ ಚಿತ್ರಸಾಹಿತಿ ಶಶಿರಾಜ್ ಕಾವೂರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಸ್ವತಃ ನಾನೇ ಕತೆ, ಚಿತ್ರಕತೆ, ಸಾಹಿತ್ಯ ಬರೆದು ನಿರ್ದೇಶಿಸುತ್ತಿರುವ ವಿಚಾರ ಡಿವೈನ್ ಸ್ಟಾರ್ ರಿಶಬ್ ಶೆಟ್ಟಿಯವರಿಗೆ ತಿಳಿಸಿದಾಗ ಸಂತೋಷದಿಂದ ಶುಭ ಹಾರೈಸಿದರು. ಅದರಿಂದ ಬಹಳ ಚೈತನ್ಯ ಬಂದಿದೆ’ ಎಂದು ಶಶಿರಾಜ್ ಕಾವೂರು ತಿಳಿಸಿದ್ದಾರೆ. ಚಿತ್ರರಂಗದ ಯಶಸ್ವಿ ನಿರ್ದೇಶಕ ರಾಜ್ ಬಿ. ಶೆಟ್ಟಿ, ಜೆ.ಪಿ.ತುಮಿನಾಡು, ಡಾ.ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ್ ಮುಂತಾದವರು ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಮತ್ತು ಚೊಚ್ಚಲ ನಿರ್ದೇಶನಕ್ಕೆ ಶುಭ ಹಾರೈಸಿದ್ದಾರೆ.