ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು ಇಂದು ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಓದುತ್ತಿದ್ದಾರೆ ಎಂದರೆ ಅದಕ್ಕೆ ಡಾ.ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿ ಕಾರಣ. ಅಂದಿನ ಸರ್ಕಾರಗಳ ಮೇಲೆ ಒತ್ತಡ ಹೇರಿ ಕನ್ನಡಕ್ಕೆ ಮೊದಲ ಸ್ಥಾನ ಸಿಗುವಂತೆ ಮಾಡಿದ ಅವರ ಹೋರಾಟ ಅವಿಸ್ಮರಣೀಯ ಎಂದು ನೆನಪಿಸಿಕೊಂಡರು.
ರಾಜ್‍ಕುಮಾರ್ ಅವರು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಮಾನವೀಯ ಗುಣಗಳು ಮತ್ತು ಮೌಲ್ಯಗಳು ಇಂದಿನ ತಲೆಮಾರಿಗೆ ದಾರಿದೀಪವಾಗಿವೆ. ರಾಮಾಯಣ, ಮಹಾಭಾರತದ ಪಾತ್ರಗಳಿರಲಿ, ಕಾದಂಬರಿ ಆಧಾರಿತ ಸಿನಿಮಾಗಳಿರಲಿ ಅವರು ಮಾಡದ ಪಾತ್ರಗಳೇ ಇಲ್ಲ. ಅಂದಿನ ಕಾಲದಲ್ಲಿ ಚಲನಚಿತ್ರ ಮತ್ತು ನಾಟಕಗಳ ಮೂಲಕವೇ ಜನರು ಜೀವನದ ಗುರಿಯನ್ನು ಕಂಡುಕೊಳ್ಳುತ್ತಿದ್ದರು ಮತ್ತು ಅದರಲ್ಲಿ ಡಾ.ರಾಜ್‍ಕುಮಾರ್ ಅವರ ಪಾತ್ರ ಬಹಳ ದೊಡ್ಡದಾಗಿತ್ತು. ಡಾ.ರಾಜ್‍ಕುಮಾರ್ ಅವರು ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಸಿನಿಮಾಗಳನ್ನು ನೋಡಿದಾಗ ನಾವೆಲ್ಲರೂ ಅಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಮನೋಭಾವ ಮೂಡುತ್ತದೆ ಎಂದು ಹೇಳಿದರು.ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ವರನಟ ಡಾ.ರಾಜ್‍ಕುಮಾರ್ ಅವರು ತಮ್ಮ ಸಿನಿಮಾಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳು ಮತ್ತು ಅವರ ಸರಳ ವ್ಯಕ್ತಿತ್ವ ಇಂದಿಗೂ ನಮಗೆಲ್ಲರಿಗೂ ಆದರ್ಶಪ್ರಾಯ.
ಡಾ.ರಾಜ್ ಅವರಿಗೆ ಹಣದ ವ್ಯಾಮೋಹ ಇರಲಿಲ್ಲ. ಅವರ ಈ ಯಶಸ್ಸಿನ ಹಿಂದೆ ಪತ್ನಿ ಪಾರ್ವತಮ್ಮ ಅವರ ಶ್ರಮ ದೊಡ್ಡದಿದೆ. ಅವರಿಬ್ಬರೂ ಆದರ್ಶ ದಂಪತಿಗಳಾಗಿ ಬದುಕಿದವರು. ರಾಜಣ್ಣ ಅವರ ಸಿನಿಮಾಗಳನ್ನು ನೋಡಿ ಎಷ್ಟೋ ಜನರು ಕೃಷಿಕರಾದರು, ಯೋಗಾಭ್ಯಾಸ ಕಲಿತರು. ಅವರ ಹಾಡುಗಳು ಇಂದಿಗೂ ಜನರ ಮನದಲ್ಲಿ ಹಸಿರಾಗಿವೆ ಎಂದು ತಿಳಿಸಿದರು.
ಡಾ.ರಾಜ್‍ಕುಮಾರ್ ಅವರ ಕುರಿತು ಉಪನ್ಯಾಸ ನೀಡಿದ ಚಿತ್ರದುರ್ಗ ಆಕಾಶವಾಣಿಯ ಡಾ.ನವೀನ್ ಮಸ್ಕಲ್, ಡಾ.ರಾಜ್‍ಕುಮಾರ್ ಸಿನಿಮಾ ಕಲಾವಿದರು ಮಾತ್ರವಲ್ಲ. ಅವರು ಸಿನಿಮಾದೊಳಗಿದ್ದು, ಸಿನಿಮಾವನ್ನು ಮೀರಿದ ಸಾಂಸ್ಕೃತಿಕ ವ್ಯಕ್ತಿತ್ವದವರಾಗಿ ಬದುಕಿದವರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಬಲವಲ್ಲದ ವಲಯದಿಂದ ಬಂದು ಸ್ವ ಸಾಮಥ್ರ್ಯದಿಂದಲೇ ಎತ್ತರಕ್ಕೇರಿದ ಅವರು ಸಾಮಾಜಿಕವಾಗಿಯು ಮುಖ್ಯ ಸಾಧಕರು ಎಂದು ಹೇಳಿದರು.