ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿ, ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹಾಗೂ ಸಾವುಗಳು ಹೆಚ್ಚಾಗುತ್ತಿದೆ. ಆದರೆ ಆರೋಗ್ಯ ಇಲಾಖೆ ನೀಡುತ್ತಿರುವ ವರದಿಗಳಲ್ಲಿ ತಪ್ಪಾಗಿ ಅಂಕಿ ಅಂಶಗಳನ್ನು ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ ರೋಗದ ನಿಯಂತ್ರಣಕ್ಕೆ ಎಷ್ಟು ಮಸ್ಕಿಟೋ ರೆಪಲೆಂಟ್ ಗಳನ್ನು ಖರೀದಿ ಮಾಡಲಾಗಿದೆ ಮತ್ತು ಎಷ್ಟನ್ನು ಡೆಂಘೀ ರೋಗಿಗಳಿಗೆ ವಿತರಿಸಲಾಗಿದೆ ಎಂದು ಪ್ರಶ್ನಿಸಿದ ಅವರು, ಈ ವೇಳೆ ಡೆಂಘೀ ಬಂದಂತಹ ವ್ಯಕ್ತಿಗೆ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆ ಕಚ್ಚಿದರೆ, ಆ ಸೊಳ್ಳೆಗೂ ಸೋಂಕು ತಗುಲುತ್ತದೆ. ಆ ಸೊಳ್ಳೆಯು 10 ದಿನಗಳವರೆಗೂ ಯಾವ ಯಾವ ವ್ಯಕ್ತಿಗೆ ಕಚ್ಚುತ್ತದೆಯೋ ಎಲ್ಲರಿಗೂ ಸೋಂಕು ಹರಡುತ್ತದೆ ಎಂದು ವಿಷಯ ಪ್ರಸ್ತಾಪಿಸಿದಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೌದಾ.. ಎಂದು ಉದ್ಘರಿಸಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು. ಆಗ ವಿಧಾನ ಪರಿಷತ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ಡಾ.ಸರ್ಜಿ ಅವರು ಹೇಳಿರುವುದು ಸರಿ ಇದೆ ಎಂದು ಧ್ವನಿಗೂಡಿಸಿದರು.ಮುಂದುವರಿದು, ಡೆಂಘೀ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಬಹಳ ಮುಖ್ಯವಾಗಿ ಡೀಟ್ ಅಂಶ ಇರುವ ರೆಪಲೆಂಟ್ ಗಳನ್ನು ಹಚ್ಚಬೇಕು, ಇದರಿಂದ ಅವರಿಗೆ ಸೊಳ್ಳೆ ಕಚ್ಚುವುದನ್ನು ತಡೆಯಬಹುದು ಹಾಗೂ ಇದರಿಂದ ಸೊಳ್ಳೆಗಳಿಗೆ ಇನ್ಫೆಕ್ಷನ್ ಆಗಿ, ಅದು ಬೇರೆ ಅವರಿಗೆ ಹರಡುವುದನ್ನು ತಡೆಯ ಬಹುದು ಎಂದು ಹೇಳಿದರು.
ಈ ವೇಳೆ ಸಚಿವ ದಿನೇಶ್ ಗುಂಡುರಾವ್ ಡಾ.ಸರ್ಜಿ ಅವರ ಸಲಹೆ ಸೂಕ್ತವಾಗಿದೆ ಇದನ್ನ ಪರಿಗಣಿಸಿ ಮುಂಜಾಗ್ರತಾ ಕ್ರಮಗಳನ್ನು ಕೈ ಕೊಳ್ಳಲಾಗುವುದು ಎಂದು ಹೇಳಿದರು