ಡಾ. ಸರೋಜಿನಿ ಅಪರೂಪದ ಮಹಿಳಾ ಸಾಧಕಿ

KannadaprabhaNewsNetwork |  
Published : Jul 06, 2025, 01:49 AM IST
5ಎಚ್‌ಯುಬಿ39ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಡಾ. ಸರೋಜಿನಿ ಶಿಂತ್ರಿ ದತ್ತಿ ಅಂಗವಾಗಿ ‘ಡಾ. ಸರೋಜಿನಿ ಶಿಂತ್ರಿ ಬದುಕು-ಬರಹ’ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕವಿವಿಯಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ,ವಿಭಾಗದ ಮುಖ್ಯಸ್ಥರಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿದರು.

ಧಾರವಾಡ: ಮಹಿಳಾ ಜಾಗೃತಿಗಾಗಿ ಜೀವನದುದ್ದಕ್ಕೂ ಶ್ರಮಿಸಿದ ಡಾ.ಸರೋಜಿನಿ ಶಿಂತ್ರಿ ಅಪರೂಪದ ಮಹಿಳಾ ಸಾಧಕಿ. ಓರ್ವ ಸಾಹಿತಿಯಾಗಿ ಅವರು ರಚಿಸಿದ ಕೃತಿಗಳು ವಿಶ್ವಕೋಶದಂತಿವೆ ಎಂದು ಪ್ರಾಚಾರ್ಯೆ ಡಾ. ಶರಣಮ್ಮ ಗೊರೇಬಾಳ ಅಭಿಪ್ರಾಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘ ಡಾ.ಸರೋಜಿನಿ ಶಿಂತ್ರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಡಾ. ಸರೋಜಿನಿ ಶಿಂತ್ರಿ ಬದುಕು-ಬರಹ ವಿಷಯ ಕುರಿತು ಮಾತನಾಡುತ್ತಿದ್ದರು.

ಶಾಲೆಗಳೇ ವಿರಳವಾದ ಮೂವತ್ತರ ದಶಕದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವುದೇ ದುಸ್ತರವಾಗಿತ್ತು. ಡಾ.ಶಿಂತ್ರಿ ಅವರ ತಂದೆ ಬಸಪ್ಪ ಶಿಂತ್ರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ತಮ್ಮ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಶಿಕ್ಷಣ ಕೊಡಿಸಿ,ವಿದ್ಯಾ ಸಂಪನ್ನರನ್ನಾಗಿ ಮಾಡಿದರು.ತಂದೆಯ ವೃತ್ತಿ ಧರ್ಮವೇ ಡಾ.ಸರೋಜಿನಿ ಶಿಂತ್ರಿ ಮೇಲೆ ಪ್ರಭಾವ ಬೀರಿತು ಎಂದರು.

ಡಾ. ಸರೋಜಿನಿ ಶಿಂತ್ರಿ ಕರ್ನಾಟಕ ಕಾಲೇಜಿನಲ್ಲಿ ಓದುವಾಗ ಡಾ.ವಿ.ಕೃ. ಗೋಕಾಕ ಅವರ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದರು.ಕವಿವಿಯಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ,ವಿಭಾಗದ ಮುಖ್ಯಸ್ಥರಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿದರು.ಆಂಗ್ಲ ಭಾಷೆಯಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದಾಗಿದೆ. ಮಹಿಳೆಯರ ಸಮಸ್ಯೆಗಳನ್ನು ಕುರಿತು ಹಾಗೂ ಸಾಧನೆಯ ಪಥದಲ್ಲಿ ಮಹಿಳೆಯರು ವಿಷಯ ಕುರಿತು ಹಲವು ಮೇರು ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮಾತನಾಡಿ, ಡಾ.ಸರೋಜಿನಿ ಶಿಂತ್ರಿ ಓರ್ವ ಪ್ರತಿಭಾನ್ವಿತ ಪ್ರಾಧ್ಯಾಪಕರು. ಶಿಂತ್ರಿ ಕುಟುಂಬದ ಜೊತೆ ನನ್ನದು ಕೌಟುಂಬಿಕ ಸಂಬಂಧ.ಅವರ ತಂದೆ ಬಸಪ್ಪ ಶಿಂತ್ರಿ ಶಿಕ್ಷಕರಾಗಿ ಧಾರವಾಡದ ಡೈಯಟ್‌ನ ಎಲ್ಲ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು ಎಂದು ಸ್ಮರಿಸಿಕೊಂಡರು.

ವೇದಿಕೆಯಲ್ಲಿ ಡಾ.ಸರೋಜಿನಿ ಶಿಂತ್ರಿ ಟ್ರಸ್ಟ್ ಸದಸ್ಯ ಬಸವರಾಜ, ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಬ. ಹಿರೇಮಠ, ಬಿ.ಎಲ್.ಪಾಟೀಲ, ಎಂ.ಎಂ.ಚಿಕ್ಕಮಠ, ನಿಂಗಣ್ಣ ಕುಂಟಿ, ಮಾರ್ಕಂಡೇಯ ದೊಡಮನಿ, ಎಸ್.ಎಂ. ದಾನಪ್ಪಗೌಡರ ಸೇರಿದಂತೆ ಮುಂತಾದವರಿದ್ದರು.

ಧಾರವಾಡ ಸಿ.ಬಿ.ನಗರದ ಗಾನ ಸಿಂಚನ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು.ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಶಶಿಧರ ತೋಡಕರ ನಿರೂಪಿಸಿದರು. ಸತೀಶತುರಮರಿ ವಂದಿಸಿದರು.

PREV