ಡಾ.ಸರೋಜಿನಿ ಮಹಿಷಿ ವರದಿ ಯಥಾವತ್‌ ಜಾರಿಗಾಗಿ ಕೆ.ಎಂ.ಶಿವಪ್ಪ ಒತ್ತಾಯ

KannadaprabhaNewsNetwork |  
Published : Nov 07, 2024, 11:47 PM IST
7ಕೆಎಂಎನ್ ಡಿ13 | Kannada Prabha

ಸಾರಾಂಶ

ಭಾಷಾವಾರು ಪ್ರಾಂತ್ಯ ರಚನೆ ಆಧಾರದ ಮೇಲೆ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದೆ. ಕನ್ನಡ ಭಾಷಿಕ ಕುಲದ ಹಿತರಕ್ಷಣೆ ಕರ್ನಾಟಕ ಸರ್ಕಾರದ ಜವಾಬ್ದಾರಿ. ಆದರೆ, ಆಳುವ ಸರ್ಕಾರಗಳ ದೂರದೃಷ್ಟಿಯ ಕೊರತೆಯಿಂದ ಕನ್ನಡಿಗರು ಕನ್ನಡ ನಾಡಿನಲ್ಲಿಯೇ ಅನ್ಯಾಯ ಆಕ್ರಮಣಕ್ಕೆ ಒಳಗಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕನ್ನಡಿಗರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಡಾ.ಸರೋಜಿನಿ ಮಹಿಷಿ ಆಯೋಗದ ವರದಿಯನ್ನು ಯಥಾವತ್‌ ಆಗಿ ಜಾರಿಗೆ ತರಬೇಕು ಮತ್ತು ಅಪ್ಪಟ ಕನ್ನಡಿಗರಾದ ನಯನಜ ಕ್ಷತ್ರೀಯ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಸಮಾಜದ ತಾಲೂಕು ಅಧ್ಯಕ್ಷ ಕೆ.ಎಂ.ಶಿವಪ್ಪ ಒತ್ತಾಯಿಸಿದರು.

ಪಟ್ಟಣದ ನಯನಜ ಕ್ಷತ್ರೀಯ ಸಮಾಜ ಸಂಘದ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿ, ಭಾಷಾವಾರು ಪ್ರಾಂತ್ಯ ರಚನೆ ಆಧಾರದ ಮೇಲೆ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದೆ. ಕನ್ನಡ ಭಾಷಿಕ ಕುಲದ ಹಿತರಕ್ಷಣೆ ಕರ್ನಾಟಕ ಸರ್ಕಾರದ ಜವಾಬ್ದಾರಿ. ಆದರೆ, ಆಳುವ ಸರ್ಕಾರಗಳ ದೂರದೃಷ್ಟಿಯ ಕೊರತೆಯಿಂದ ಕನ್ನಡಿಗರು ಕನ್ನಡ ನಾಡಿನಲ್ಲಿಯೇ ಅನ್ಯಾಯ ಆಕ್ರಮಣಕ್ಕೆ ಒಳಗಾಗಿದ್ದಾರೆ ಎಂದು ವಿಷಾದಿಸಿದರು.

ಕನ್ನಡ ನೆಲದಲ್ಲಿ ಭಾಷೆ ಕಲಿಸುವುದಕ್ಕೂ ಕಾನೂನು ತೊಡಕು ಎದುರಾಗಿದೆ. ಅನ್ಯ ಭಾಷಿಕರು ಕನ್ನಡ ಕಲಿಯುವ ಬದಲು ಮಾತನಾಡಿ ಎಂದು ಹೇಳಿದರೆ ಹಲ್ಲೆ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ ಎಂದು ಕಿಡಿಕಾರಿದರು.

ಈ ನೆಲದಲ್ಲಿ ಕನ್ನಡದ ಮಕ್ಕಳಿಗೆ ಉದ್ಯೋಗ ದೊರಕುತ್ತಿಲ್ಲ. ಕೇವಲ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಸಂಭ್ರಮಿಸಿದರೆ ಕನ್ನಡಿಗರ ಬದುಕು ಬದಲಾಗುವುದಿಲ್ಲ. ಕನ್ನಡದ ಮಕ್ಕಳಿಗೆ ಉದ್ಯೋಗ ದೊರಕಲು ಸರ್ಕಾರ ಸರೋಜಿನಿ ಮಹಿಷಿ ಆಯೋಗದ ವರದಿ ಅಂಗೀಕರಿಸಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿದರು.

ಕ್ಷೌರಿಕ ವೃತ್ತಿಯನ್ನು ಕುಲಕಸುಬನ್ನಾಗಿಸಿಕೊಂಡಿರುವ ನಯನಜ ಕ್ಷತ್ರೀಯ, ಹಡಪದ, ಕ್ಷೌರಿಕ ಸಮುದಾಯ ಅಪ್ಪಟ ಕನ್ನಡಿಗರು. ಆದರೆ, ಸರ್ಕಾರ ತೆಲುಗು ಮೂಲದ ಸವಿತಾ ಸಮಾಜದವರಿಗಾಗಿ ಅಭಿವೃದ್ದಿ ನಿಗಮ ಸ್ಥಾಪಿಸಿ ತೆಲುಗರ ಅಡಿಯಲ್ಲಿ ಕನ್ನಡಿಗರನ್ನು ತಂದು ನಿಲ್ಲಿಸಿ ಮೂಲ ಕನ್ನಡಿಗರಿಗೆ ಅಪಮಾನ ಮಾಡಿದೆ ಎಂದು ದೂರಿದರು.

ಕನ್ನಡಿಗರಾದ ನಯನಜ ಕ್ಷತ್ರೀಯ ಸಮಾಜಕ್ಕೂ ಸವಿತಾ ಸಮಾಜಕ್ಕೂ ಪರಸ್ಪರ ಸಂಬಂಧವೇ ಇಲ್ಲ. ನಮ್ಮ ಆಚಾರ-ವಿಚಾರ ಭಾಷೆಗಳೇ ಬೇರೆ, ಸವಿತಾ ಸಮಾಜದವರ ಆಚಾರ ವಿಚಾರ-ಭಾಷೆಗಳೇ ಬೇರೆ. ರಾಜ್ಯಾದ ಹಲವೆಡೆ ಹಡಪದ ಸಮುದಾಯದಿಂದ ಗುರುತಿಸಿಕೊಳ್ಳುವ ಕ್ಷೌರಿಕ ಕುಲದವರಿದ್ದಾರೆ ಎಂದರು.

ಅಪ್ಪಟ ಕನ್ನಡಿಗರಾದ ನಯನಜ ಕ್ಷತ್ರೀಯ, ಹಡಪದ, ಕ್ಷೌರಿಕ ಮುಂತಾದ ಶೋಷಿತ ಸಮುದಾಯಗಳ ಅಭಿವೃದ್ದಿಗಾಗಿ ಪ್ರತ್ಯೇಕ ನಯನಜ ಕ್ಷತ್ರೀಯ ಅಭಿವೃದ್ದಿ ನಿಗಮವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಮುದಾಯದ ಮುಖಂಡರಾದ ಗೋವಿಂದರಾಜು, ಪುಟ್ಟಸ್ವಾಮಿ, ವೆಂಕಟರಾಮು, ಶ್ಯಂ ಸುಂದರ್, ನಂಜುಂಡ, ಮರಿಯ್ಯಯ್ಯ, ರಾಮಕೃಷ್ಣ, ಮಂಜುನಾಥ್, ಮುರುಕನಹಳ್ಳಿ ಮೋಹನ್, ಹಾದನೂರು ಸ್ವಾಮಿ, ಶಾಂತಮೂರ್ತಿ, ವಿನಯ್, ಆರ್.ಮಂಜುನಾಥ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ದೆಹಲಿ ಪ್ರಯಾಣದ ನಂತರ ಸಂಪುಟ ಪುನಾರಚನೆ
ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜನರಿಗೆ ತಲುಪಿಸಿ