ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬೆಳಗ್ಗೆ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್ ಅವರು ಸಿದ್ದಗಂಗಾಶ್ರಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ಬಳಿಕ ಉಚಿತವಾಗಿ ಕ್ಯಾನ್‌ಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಸಿದ್ದಗಂಗಾಶ್ರೀಗಳ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದೆ. ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಕೇವಲ ೫ ರು.ಗೆ ೨೦ ಲೀಟರ್ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ.
ಇಂದು ಅವರ ಜಯಂತ್ಯುತ್ಸವದ ಪ್ರಯುಕ್ತ ಆಡಳಿತ ಮಂಡಲಿಯ ತೀರ್ಮಾನ ದಂತೆ ಬೆಳಗ್ಗೆಯಿಂದ ಸಂಜೆವರೆಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ನೀಡಲು ತೀರ್ಮಾನಿಸಿ, ಸಾರ್ವಜನಿಕರು ಹಾಗೂ ಈ ಬಡಾವಣೆಯ ನಾಗರೀಕರು ಈ ಉಚಿತ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಿದ್ದಗಂಗಾಶ್ರೀಗಳ ಪ್ರೇರಣೆ ಮತ್ತು ದಾಸೋಹ ಪರಿಕಲ್ಪನೆ ಪ್ರಪಂಚಕ್ಕೆ ಮಾದರಿಯಾಗಿದೆ. ಅವರ ಸೇವಾ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.ಭಾರತ ರತ್ನ ನೀಡಲಿ:
ಶ್ರೀ ಡಾ. ಶಿವಕುಮಾರಸ್ವಾಮಿಗಳು ಮಾಡಿರುವ ಸೇವೆ ವಿಶ್ವಕ್ಕೆ ಮಾದರಿಯಾಗಿದೆ ಅನ್ನ ದಾಸೋಹ, ವಿದ್ಯಾ ದಾಸೋಹ, ಜ್ಞಾನ ದಾಸೋಹ ಮಾಡುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಅವರ ಹೆಸರಿನಲ್ಲಿ ಇಂದು ಕೂಡ ನಾನಾ ಸೇವಾ ಕಾರ್ಯಗಳು ನಡೆಯುತ್ತದೆ. ಇಂಥ ಪುಣ್ಯ ಪುರುಷರಿಗೆ ಭಾರತ ರತ್ನ ನೀಡಿದರೆ, ಆ ಪ್ರಶಸ್ತಿಗೆ ಇನ್ನು ಹೆಚ್ಚು ಗೌರವ ಭಾವನೆ ಮೂಡುತ್ತದೆ. ಹೀಗಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಗೌರಿಶಂಕರ್ ಈ ಸಂದರ್ಭದಲ್ಲಿ ಒತ್ತಾಯ ಮಾಡಿದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷೆ ಸುಂದ್ರಪ್ಪ, ಆರ್.ಎಸ್. ಲಿಂಗರಾಜು, ನಿರ್ದೇಶಕರಾದ ಡಾ. ಪರಮೇಶ್ವರಪ್ಪ, ಕೆ.ಎಸ್.ಮಹದೇವಸ್ವಾಮಿ, ವಿ. ನಂಜುಂಡಸ್ವಾಮಿ, ಗುರುಸ್ವಾಮಿ, ಬದನಗುಪ್ಪೆ ಗುರುಸ್ವಾಮಿ, ರಾಜಶೇಖರ್, ಲಿಂಗರಾಜಮೂರ್ತಿ, ದೊರೆಸ್ವಾಮಿ, ನಾಗೇಂದ್ರ, ಪ್ರಮೀಳಾ ಉದಕಟ್ಟಿ, ನಾಗಮಣಿ, ಶಿಕ್ಷಕ ಮಲ್ಲೇಶ್, ಸಿಇಒ ನಂಜುಂಡಸ್ವಾಮಿ, ಮಹೇಂದ್ರ, ಆಕಾಶ್ ಇತರರು ಇದ್ದರು.