ಧಾರವಾಡ: ಕನ್ನಡ ನಾಡು- ನುಡಿಗೋಸ್ಕರ ಕಾರ್ಯ ಮಾಡುವ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜಕೀಯವೇ ತುಂಬಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ತಕ್ಕುದಾದ ಅಭ್ಯರ್ಥಿ ಎಂದೇ ಹೇಳಲಾಗಿದ್ದ ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಅವರು ರಾಜಕಾರಣಿಗಳ ನಡೆಯಿಂದ ಬೇಸತ್ತು ತಮ್ಮ ನಾಮಪತ್ರವನ್ನು ಕೊನೆ ಕ್ಷಣದಲ್ಲಿ ಹಿಂಪಡೆದಿದ್ದಾರೆ.
ರಾಜೂರ ಅವರೇ ಸ್ಪರ್ಧಿಸಲಿ, ಅವರಿಗೆ ಬೆಂಬಲ ನೀಡೋಣ ಎಂದು ಅಧ್ಯಕ್ಷ ಸ್ಥಾನಕ್ಕೆ ಗುರುರಾಜ ಹುಣಸಿಮರದ, ಪರಮೇಶ್ವರ ಕಾಳೆ ಹಾಗೂ ಮಕ್ಕಳ ಸಾಹಿತಿ ನಿಂಗಣ್ಣ ಕುಂಠಿ ಸಹ ಕಣದಿಂದ ಹಿಂದೆ ಸರಿದರು. ಆದರೆ, ರಾಜೂರ ನಿರೀಕ್ಷೆಯಂತೆ ಚಂದ್ರಕಾಂತ ಬೆಲ್ಲದ ಹಾಗೂ ಮೋಹನ ಲಿಂಬಿಕಾಯಿ ಅವರು ಹಿಂದೆ ಸರಿಯಬೇಕಿತ್ತು. ಆದರೆ, ಅವರಿಬ್ಬರೂ ಹಿಂದೆ ಸರಿಯದ ಕಾರಣ ರಾಜೂರ ಅವರೇ ಸಂಘದ ಸಹವಾಸ ಬೇಡವೆಂದು ನಾಮಪತ್ರ ವಾಪಸ್ಸು ಪಡೆದರು ಎಂದು ರಾಜೂರ ಅವರ ಆಪ್ತರು ಮಾಹಿತಿ ನೀಡಿದ್ದಾರೆ.
ಕಾರ್ಯಕಾರಿ ಸಮಿತಿ ಎಸ್‌ಸಿ, ಎಸ್.ಟಿ ಮೀಸಲು ಡಾ. ಅನೀಲ ಮೇತ್ರಿ ಸಹ ಕಣದಿಂದ ಹಿಂದೆ ಸರಿದಿದ್ದಾರೆ.ಅಂತಿಮ ಕಣದಲ್ಲಿದ್ದವರು: ಮೇ 25ರಂದು ನಡೆಯುವ ಚುನಾವಣೆಯಲ್ಲಿ ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಕಾಂತ ಬೆಲ್ಲದ, ಚಂದ್ರಶೇಖರ ರಾಯರ, ಮೋಹನ ಲಿಂಬಿಕಾಯಿ, ಹನುಮಾಕ್ಷಿ ಗೋಗಿ ಕಣದಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಸಂಜೀವ ಕುಲಕರ್ಣಿ, ಶರಣಪ್ಪ ಕೊಟಗಿ ಹಾಗೂ ಡಾ. ಡಿ.ಎಂ. ಹಿರೇಮಠ ಕಣದಲ್ಲಿದ್ದಾರೆ. ಕಾರ‍್ಯಾಧ್ಯಕ್ಷ ಸ್ಥಾನಕ್ಕೆ ಬಸವಪ್ರಭು ಹೊಸಕೇರಿ, ಮನೋಜ ಪಾಟೀಲ, ಕೋಶಾಧ್ಯಕ್ಷ ಸ್ಥಾನಕ್ಕೆ ಸತೀಶ ಜಿ. ತುರಮರಿ, ವೀರಣ್ಣ ಬಿ. ಯಳಲಿ, ಸಂಜೀವ ಧುಮಕನಾಳ ಕಣದಲ್ಲಿದ್ದಾರೆ.
ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸ್ಥಾನಕ್ಕೆ ವಿಶ್ವೇಶ್ವರಿ ಹಿರೇಮಠ, ಡಾ. ರತ್ನಾ ಐರಸಂಗ, ಸುವರ್ಣ ಸುರಕೋಡ ಕಣದಲ್ಲಿ ಉಳಿದರೆ, ಕಾರ‍್ಯಕಾರಿ ಎಸ್.ಸಿ/ಎಸ್.ಟಿ. ಮೀಸಲು ಸ್ಥಾನಕ್ಕೆ ಪ್ರೊ. ಧನವಂತ ಹಾಜವಗೋಳ, ಮಲ್ಲಮ್ಮ ಭಜಂತ್ರಿ, ಡಾ. ವಿಶ್ವನಾಥ ಚಿಂತಾಮಣಿ, ಡಾ. ರುದ್ರಪ್ಪನಾಯ್ಕ ಇಂಚಲ ಹಾಗೂ ಪರಮೇಶ್ವರ ಕಾಳೆ ಉಳಿದುಕೊಂಡಿದ್ದಾರೆ.