ಬೆಳ್ತಂಗಡಿ : ‘ರಾಜ್ಯದ ಕಾಂಗ್ರೆಸ್ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಸತ್ಯದ ಅನಾವರಣವಾಗಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೇಳಿ ಬಂದಿದ್ದ ಅಪಪ್ರಚಾರ, ಕ್ಷೇತ್ರದ ವಿರುದ್ಧ ನಡೆದ ಷಡ್ಯಂತ್ರ ಬಯಲಾಗಿದ್ದು, ನಾವೀಗ ನಿರಾಳವಾಗಿದ್ದೇವೆ. ಆರಂಭದಲ್ಲೆ ಎಸ್ಐಟಿ ರಚನೆಯನ್ನು ನಾನು ಸ್ವಾಗತಿಸಿ, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದೆ. ಈಗ ಮತ್ತೊಮ್ಮೆ ಸರ್ಕಾರ ಮತ್ತು ಎಸ್ಐಟಿಗೆ ಕೃತಜ್ಞತೆ ಸಲ್ಲಿಸುವೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಭಾನುವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ 81 ಗ್ರಾಮಗಳ ಗ್ರಾಮಸ್ಥರು ಸೇರಿ ಆಯೋಜಿಸಿದ ಸತ್ಯದರ್ಶನ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಚಿನ್ನವನ್ನು ಬೆಂಕಿಗೆ ಹಾಕಿದರೆ ಅದು ಮತ್ತಷ್ಟು ಸ್ಫುಟಗೊಂಡು ಪರಿಶುದ್ಧವಾಗಿ ಹೊಳೆಯುತ್ತದೆ. ಅದೇ ರೀತಿ ಧರ್ಮಸ್ಥಳದ ಬಗ್ಯೆ ಷಡ್ಯಂತ್ರದಿಂದ ಸುಳ್ಳು ವದಂತಿ ಪಸರಿಸಿ ಅಪಚಾರ ಮಾಡಿದರೂ, ಷಡ್ಯಂತ್ರದ ಚಿದಂಬರ ರಹಸ್ಯ ಬಯಲಾಗಿ ಪವಿತ್ರ ಕ್ಷೇತ್ರ ಇನ್ನಷ್ಟು ಬೆಳಗುತ್ತಿದೆ, ಬೆಳೆಯುತ್ತಿದೆ. ಈಗ ಇಲ್ಲಿಗೆ ಬರುವ ಭಕ್ತರು ಮತ್ತು ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಾ ಭಕ್ತರು ಶ್ರದ್ಧಾ-ಭಕ್ತಿಯಿಂದ ಬಂದು ಸೇವೆ ಮಾಡುತ್ತಿದ್ದಾರೆ’ ಎಂದರು.
‘ಇಂದಿನವರೆಗೆ ಮನದಾಳದಲ್ಲಿ ಕೊಂಚ ನೋವಿತ್ತು. ಚಿಂತನ-ಮಂಥನಕ್ಕೆ ಅವಕಾಶವಿರಲಿಲ್ಲ. ಆದರೆ, ಇಂದು ಬೆಳ್ತಂಗಡಿ ತಾಲೂಕಿನ ಎಲ್ಲಾ 81 ಗ್ರಾಮಗಳ ಗ್ರಾಮಸ್ಥರು ಸಂಘಟಿತರಾಗಿ ಬಂದು ನಾವು ನಿಮ್ಮ ಹಿಂದೆ ಸದಾಕಾಲ ಇದ್ದೇವೆ ಎಂದು ಪ್ರೀತಿ-ವಿಶ್ವಾಸ, ಗೌರವ ಮತ್ತು ಅಭಿಮಾನ ವ್ಯಕ್ತಪಡಿಸಿರುವುದರಿಂದ ನಾನು ತುಂಬಾ ಸಂತೋಷ ಮತ್ತು ತೃಪ್ತಿ ಹೊಂದಿದ್ದೇನೆ’ ಎಂದು ಹೆಗ್ಗಡೆ ತಿಳಿಸಿದರು.
‘ಜೊತೆಗೆ, ಧರ್ಮಸ್ಥಳದ ವತಿಯಿಂದ ಹಲವು ಸಮಾಜಮುಖಿ ಸೇವಾಕಾರ್ಯಗಳನ್ನು ಎಲ್ಲರ ಕಲ್ಯಾಣಕ್ಕಾಗಿ ಸದ್ಯದಲ್ಲೇ ಪ್ರಾರಂಭಿಸಲಾಗುವುದು’ ಎಂದು ಹೆಗ್ಗಡೆ ಪ್ರಕಟಿಸಿದರು.
ಸಮಾವೇಶಕ್ಕೆ ಪೂರ್ವಭಾವಿಯಾಗಿ ಧರ್ಮಸ್ಥಳದ ದೇವಸ್ಥಾನದ ಅರ್ಚಕ ರಾಮಕೃಷ್ಣ ಕಲ್ಲೂರಾಯರ ನೇತೃತ್ವದಲ್ಲಿ ಚಂಡಿಕಾಹೋಮ ನಡೆಯಿತು. ಇದರ ಪೂರ್ಣಾಹುತಿಯಲ್ಲಿ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.
- ನಿನ್ನೆ ಧರ್ಮಸ್ಥಳದಲ್ಲಿ ಬೆಳ್ತಂಗಡಿ ತಾಲೂಕು ಜನರಿಂದ ಸತ್ಯದರ್ಶನ ಸಮಾವೇಶ, ಚಂಡಿಕಾಹೋಮ
- ಹೋಮ, ಸಭೆಯಲ್ಲಿ ಧರ್ಮಾಧಿಕಾರಿ ಡಾ। ಹೆಗ್ಗಡೆ ಭಾಗಿ. ತಮ್ಮ ಪರ ನಿಂತ ಗ್ರಾಮಸ್ಥರಿಗೆ ಕೃತಜ್ಞತೆ
- ಧರ್ಮಸ್ಥಳ ಕ್ಷೇತ್ರದ ಬಗ್ಯೆ ಷಡ್ಯಂತ್ರದಿಂದ ಸುಳ್ಳು ವದಂತಿ ಪಸರಿಸಿ ಅಪಚಾರ ಮಾಡಲಾಗಿತ್ತು
- ಆದರೆ ಈಗ ಷಡ್ಯಂತ್ರದ ಚಿದಂಬರ ರಹಸ್ಯ ಬಯಲಾಗಿ ಪವಿತ್ರ ಕ್ಷೇತ್ರ ಇನ್ನಷ್ಟು ಬೆಳಗುತ್ತಿದೆ
- ಧರ್ಮಸ್ಥಳಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚಿದೆ. ಶ್ರದ್ಧಾ ಭಕ್ತಿಯಿಂದ ಅವರಿಂದ ಸೇವೆ: ಡಾ। ಹೆಗ್ಗಡೆ ಹರ್ಷ