ತಾಲೂಕಿನ ಖಾಲಿ ಇರುವ ಕೆರೆಗಳಿಗೆ ಕೂಡಲೇ ನೀರು ಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಸ್ಥಳೀಯ ಶಾಸಕರು ಹಾಗೂ ನೀರಾವರಿ ಅಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮನೆಗೆ ತೆರಳಿ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.
ಬ್ಯಾಡಗಿ: ತಾಲೂಕಿನ ಖಾಲಿ ಇರುವ ಕೆರೆಗಳಿಗೆ ಕೂಡಲೇ ನೀರು ಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಸ್ಥಳೀಯ ಶಾಸಕರು ಹಾಗೂ ನೀರಾವರಿ ಅಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮನೆಗೆ ತೆರಳಿ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.
ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಬಿಜೆಪಿ ತಾಲೂಕು ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದ್ದು, ರೈತರ ಬದುಕು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಆಣೂರು ಬುಡಪನಹಳ್ಳಿ ಹಾಗೂ ಗುಡ್ಡದಮಲ್ಲಾಪುರ ನೀರಾವರಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋಟಾರು ಹಾಳಾದರೂ ಅದನ್ನು ದುರಸ್ತಿ ಮಾಡಿಸಲು ಸರಕಾದ ಬಳಿ ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗದಿದ್ದರೆ ಅವುಗಳ ಪ್ರಯೋಜನ ರೈತರಿಗೆ ಹೇಗೆ ದೊರೆಯಲಿದೆ ಎಂದು ಪ್ರಶ್ನಿಸಿದರು.
ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ:ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ತಾಲೂಕಿನ ತಹಸೀಲ್ದಾರ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಯಾವ ಇಲಾಖೆಯ ಅಧಿಕಾರಿಗಳ ಮೇಲೂ ಶಾಸಕರಿಗೆ ಹಿಡಿತವಿಲ್ಲದ ಪರಿಣಾಮ ಅಧಿಕಾರಿಗಳು ಮಾಡಿದ್ದೇ ಕೆಲಸ, ಆಡಿದ್ದೇ ಆಟ ಎಂಬಂತಾಗಿದೆ. ಕೆಲಸ ಮಾಡಲು ಇಷ್ಟವಿದ್ದರೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ, ಇಲ್ಲವಾದರೆ ತಾಲೂಕಿನಿಂದ ಹೊರ ಹೋಗಿ ಎಂದರಲ್ಲದೇ ಬುಡಪನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದೆ ಎಂದು ನೀರಾವರಿ ಅಧಿಕಾರಿಗಳು ಹೇಳುತ್ತಿದ್ದಾರೆ. ನಿಜವಾಗಿಯೂ ನೀರು ಹರಿಸಲಾಗುತ್ತಿದ್ದರೆ ಈಗಲೇ ಸ್ಥಳಕ್ಕೆ ತೆರಳಿ ನಮಗೆ ತೋರಿಸಲಿ ಎಂದು ಸವಾಲು ಹಾಕಿದರು.
ನಿರ್ವಹಣೆಗೂ ಹಣವಿಲ್ಲದ ಸರ್ಕಾರ:ಶಂಕರಗೌಡ ಪಾಟೀಲ ಮಾತನಾಡಿ, 469 ಕೋಟಿ ರು. ವೆಚ್ಚದ ಆಣೂರು-ಬುಡಪನಹಳ್ಳಿ ನೀರಾವರಿ ಯೋಜನೆ ಜಾರಿಗೆ ತರಲು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಇದೀಗ ಜಾರಿಯಾಗಿರುವ ಯೋಜನೆಯನ್ನು ಸಮರ್ಪಕ ನಿರ್ವಹಿಸಲು ಸಹ ಸರ್ಕಾರದ ಬಳಿ ಹಣವಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಶಂಕ್ರಣ್ಣ ಅಕ್ಕಿ ಮಾತನಾಡಿ, ರಾಜ್ಯದ ಹಲವು ಭಾಗಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ರಾಜಕೀ ಯ ವಿಚಾರಗಳಲ್ಲೇ ತೊಡಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು, ಬಿಜೆಪಿ ತಾಲೂಕು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಕೆರೆಗಳಿಗೆ ನೀರು ಹರಿಸಲು ಒಂದು ವಾರ ಗಡುವು
ಪ್ರತಿಭಟನೆಯ ಮಾಹಿತಿ ಇದ್ದರೂ ತಹಸೀಲ್ದಾರ್ ಕಚೇರಿಯಿಂದ ಹೊರಬಾರದ ತಹಸೀಲ್ದಾರ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರತಿಭಟನಾಕಾರರ ಒತ್ತಡದ ಬಳಿಕ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬುಡಪನಹಳ್ಳಿ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರೂ ಪ್ರತಿಭಟನಾಕಾರರು ಇದಕ್ಕೆ ಒಪ್ಪಲಿಲ್ಲ. ಮುಂದಿನ ವಾರದೊಳಗೆ ಕೆರೆಗಳಿಗೆ ನೀರು ಹರಿಸದಿದ್ದರೆ ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.