ಹುಬ್ಬಳ್ಳಿ: ಬೈರಿದೇವರಕೊಪ್ಪ ವ್ಯಾಪ್ತಿಯ ವೀರ ಸಂಗೊಳ್ಳಿ ರಾಯಣ್ಣ ನಗರದ ಬಹುದಿನದ ಬೇಡಿಕೆಗಳಾದ ಒಳಚರಂಡಿ, ರಸ್ತೆಗಳ ಪುನರ್ ನಿರ್ಮಾಣಕ್ಕೆ ಕೊನೆಗೂ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಿಕೊಂಡಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿವೆ.
ಸಂಗೊಳ್ಳಿ ರಾಯಣ್ಣ ನಗರದ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಶಿವಣ್ಣ ಅವರು, ನಮ್ಮ ಬಡಾವಣೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಅಳವಡಿಸಿದ್ದ ಒಳಚರಂಡಿ ಲೈನ್ ಗೆ ಅಕ್ಕಪಕ್ಕದ ಬಡಾವಣೆಗಳ ಒಳಚರಂಡಿ ಜೋಡಿಸಿದ್ದರಿಂದ ಒತ್ತಡ ತಾಳದೇ ಒಡೆಯುತ್ತಿವೆ. ದರ್ಗಾ ತೆರವು ವೇಳೆ ಮಾರ್ಗ ಬದಲಿಸಿ ನಮ್ಮ ಬಡಾವಣೆಯ ಮೂಲಕ ಎಲ್ಲ ವಾಹನಗಳನ್ನು ಓಡಿಸಿದ್ದರಿಂದ ರಸ್ತೆಗಳೆಲ್ಲ ಹಾಳಾಗಿವೆ. ನಿರ್ವಹಣೆ ಕೊರತೆಯಿಂದ ಚರಂಡಿಗಳು ಹಾಳಾಗಿವೆ ಎಂದು ಮನವರಿಕೆ ಮಾಡಿದರು.
ಈ ವಿಷಯವಾಗಿ ಹಲವು ಬಾರಿ ಮನವಿ, ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ಹಸ್ತಾಂತರ ಮಾಡುವ ಮುನ್ನವೇ ಈ ಸಮಸ್ಯೆ ಬಗೆಹರಿಸಿ ಹಸ್ತಾಂತರ ಮಾಡಬೇಕು ಎಂದು ಕೋರಿದರು.ಇದಕ್ಕೆ ಪ್ರತಿಕ್ರಿಯಿಸಿದ ಹುಡಾ ಆಯುಕ್ತ ಬಿರಾದಾರ ಅವರು, ಹುಡಾ ಈ ವರೆಗೆ 32 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಆದರೆ, ಬರೋಬ್ಬರಿ ₹8.5 ಕೋಟಿ ವ್ಯಯಿಸಿದ್ದು ಈ ಬಡಾವಣೆಗೆ ಮಾತ್ರ. ಆದಾಗ್ಯೂ ಶಾಸಕರು ವಿಶೇಷ ಪ್ರಯತ್ನದಿಂದ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಹುಡಾ ಅಧ್ಯಕ್ಷ ಶಾಕೀರ್ ಸನದಿ ಅವರು, ಬಡಾವಣೆಯಲ್ಲಿನ ಎಲ್ಲ ಗಾರ್ಡನ್ ಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿ ವಾಕಿಂಗ್ ಪಾತ್ ನಿರ್ಮಾಣ, ಹಿರಿಯರ ಜಿಮ್, ಮಕ್ಕಳ ಆಟಿಗೆ , ಹೈಮಾಸ್ಕ್ ಲೈಟ್ ಅಳವಡಿಸುವುದಾ ಮತ್ತು ಒಂದು ಬಸ್ ಶೆಲ್ಟರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಪಾಲಿಕೆಯ ವಲಯ ಅಧಿಕಾರಿ ರಮೇಶ್ ನೂಲ್ಪಿ, ಬಡಾವಣೆಯ ಸಿ.ಎಸ್. ಹವಾಲದಾರ, ರಾಜು ವಿಜಾಪುರ, ಮಲ್ಲಿಕಾರ್ಜುನ ಸಿದ್ದಣ್ಣವರ, ಕೃಷ್ಣಾ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಹಿರಿಯರು ಸಭೆಯಲ್ಲಿ ಭಾಗವಹಿಸಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕರಿಗೆ, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.