ನಾಗರಾಜ ಎಸ್.ಬಡದಾಳ್
ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಯ ಬಹುತೇಕ ಭಾಗಗಳಿಗೆ ಕುಡಿಯುವ ನೀರು, ಕೃಷಿಗೆ ಆಧಾರವಾದ ದಕ್ಷಿಣ ಏಷ್ಯಾದ ಎರಡನೇ ಅತೀ ದೊಡ್ಡ ಕೆರೆ ಎಂಬ ಖ್ಯಾತಿಯ ಸೂಳೆಕೆರೆ ಒಡಲು ಈಗ ಅಕ್ರಮ ಪಂಪ್‌ಸೆಟ್‌ಗಳ ಹಾವಳಿಯಿಂದಾಗಿ ಬರಿದಾಗುತ್ತಿದೆ!
ಭೀಕರ ಬರದಿಂದಾಗಿ ತತ್ತರಿಸಿರುವ ರಾಜ್ಯದಲ್ಲಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ತಕ್ಕಮಟ್ಟಿಗೆ ಆಸರೆಯಾದ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ದಿನದಿನಕ್ಕೂ ಹರಡುತ್ತಿರುವ ಅಕ್ರಮ ಪಂಪ್‌ಸೆಟ್‌ಗಳು ಕೆರೆಯನ್ನೇ ಬರಿದು ಮಾಡುತ್ತಿವೆ. ತೋಟಕ್ಕೆ ನೀರು ಹಾಯಿಸಲು ಕೆರೆಯಿಂದ ಹಲವು ಕಿಮೀ ದೂರದವರೆಗೆ ಅಕ್ರಮವಾಗಿ ಪೈಪ್ ಲೈನ್ ಹಾಕಿದ್ದರೂ ನೀರಾವರಿ ಇಲಾಖೆ, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಂತಿದೆ.ಕುಡಿಯುವ ನೀರು, ಕೃಷಿಗೆ ಆಧಾರವಾದ ಸೂಳೆಕೆರೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಅಳವಡಿಸಲಾಗಿದೆ. ಸಾವಿರಾರು ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಸ್ಥಿತಿಯಲ್ಲಿರುವ ಚನ್ನಗಿರಿ ತಾಲೂಕಿನಲ್ಲಿ ರೈತರು ತಮ್ಮ ಅಡಿಕೆ ಇತರೆ ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸೂಳೆಕೆರೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳಿಂದಾಗಿ ಹತ್ತಾರು ಅಡಿ ಇದ್ದ ನೀರಿನ ಮಟ್ಟ ಈಗ ಕೇವಲ ಏಳೆಂಟು ಅಡಿಗೆ ತಲುಪಿದೆ. ಕಳೆದ ಕೆಲ ದಶಕದಿಂದ ಸೂಳೆಕೆರೆ ತುಂಬಿದಾಗ ಮುಳುಗಡೆಯಾಗುತ್ತಿದ್ದ ಸಿದ್ದನಾಲ, ಬಸವ ನಾಲಾ ತೂಬುಗಳಿರುವ ಕಡೆಗಳಲ್ಲಿದ್ದ ನೀರಿನ ಮಟ್ಟ ತೋರಿಸುವ ಕುದುರೆ ತೂಬು ದರ್ಶನವಾಗುತ್ತಿದೆ. ಕುದುರೆ ತೂಬು ಕಾಣಿಸಿಕೊಂಡಾಗಲೆಲ್ಲಾ ಬರ ನಿಶ್ಚಿತ, ನೀರಿನ ಸಂಕಷ್ಟ ಪಡಬೇಕಾದ ಪರಿಸ್ಥಿತಿ ಬಂದೊದಗಲಿದೆ ಎನ್ನುತ್ತಾರೆ ಸ್ಥಳೀಯ ರೈತರು.
ಕುಡಿಯುವ ನೀರಿಗೆ ಹಾಹಾಕಾರ:
ಭದ್ರಾ ನಾಲೆಯಲ್ಲಿ ಅಕ್ರಮ ಪಂಪ್ ಸೆಟ್ ಹಾವಳಿ ತಡೆಯಲು ಕಂದಾಯ, ನೀರಾವರಿ, ಪೊಲೀಸ್ ಇಲಾಖೆ, ಬೆಸ್ಕಾಂ ಒಳಗೊಂಡ 3 ತಂಡ ರಚಿಸಲಾಗಿದೆ. ನಾಲೆಗೆ ಹೊಂದಿಕೊಂಡಿರುವ ಅಕ್ರಮ ಪಂಪ್ ಸೆಟ್ ತೆರವಿಗೆ ಸೂಚನೆ ನೀಡಿದೆ, ತೆರವುಗೊಳಿಸದಿದ್ದರೆ ನಾಲೆಯುದ್ದಕ್ಕೂ 144ನೇ ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೆ ಜಿಲ್ಲಾಡಳಿತ ಸಜ್ಜಾಗಿದೆ. ಅಲ್ಲದೇ, ಬೆಸ್ಕಾಂನಿಂದ ಅಕ್ರಮ ಪಂಪ್ ಸೆಟ್ ಅಳವಡಿಸಿರುವ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಕ್ಕೂ ಸೂಚನೆ ನೀಡಿದೆ.