ಗುರುವಾರ ಯುಗಾದಿ ಹಬ್ಬದ ಆಚರಣೆ ಬೆನ್ನಲ್ಲೇ ಶುಕ್ರವಾರ ಹೊಸ ತೊಡಕು ಇದ್ದುದರಿಂದ ಬೆಳ್ಳಂಬೆಳಗ್ಗೆಯೇ ಮಾಂಸ ಖರೀದಿಸಲು ಮಾಂಸದಂಗಡಿಗಳ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತದ್ದು ನಗರದ ಹಲವೆಡೆ ಕಂಡುಬಂತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗುರುವಾರ ಯುಗಾದಿ ಹಬ್ಬದ ಆಚರಣೆ ಬೆನ್ನಲ್ಲೇ ಶುಕ್ರವಾರ ಹೊಸ ತೊಡಕು ಇದ್ದುದರಿಂದ ಬೆಳ್ಳಂಬೆಳಗ್ಗೆಯೇ ಮಾಂಸ ಖರೀದಿಸಲು ಮಾಂಸದಂಗಡಿಗಳ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತದ್ದು ನಗರದ ಹಲವೆಡೆ ಕಂಡುಬಂತು.ಮೈಸೂರು ರಸ್ತೆಯ ಬ್ಯಾಟರಾಯನಪುರದ ಪಾಪಣ್ಣ ಮಟನ್ ಸ್ಟಾಲ್ ಮಾಂಸಕ್ಕೆ ಹೆಸರುವಾಸಿಯಾಗಿದ್ದು ಹೊಸ ತೊಡಕು ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ನಾಲ್ಕು ಗಂಟೆಯಿಂದಲೇ ಅಂಗಡಿ ಮುಂದೆ ಮಟನ್ ಖರೀದಿಸಲು ಜನರು ಸಾಲುಗಟ್ಟಿ ನಿಂತಿದ್ದರು. ಗ್ರಾಹಕರ ಸಂಖ್ಯೆ ಅಧಿಕವಾಗಿದ್ದರಿಂದ ಅಂಗಡಿ ಮಾಲೀಕರು ಮುಂಜಾನೆಯೇ ಅಂಗಡಿ ತೆರೆದಿದ್ದು, ನಾಲ್ಕೈದು ಕೌಂಟರ್‌ಗಳಲ್ಲಿ ಗ್ರಾಹಕರಿಗೆ ಮಾಂಸ ವಿತರಿಸಿದರು.
ಅನಿಲ ಸಿಲಿಂಡರ್ ಅಭಾವದ ಜೊತೆಗೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದರೂ ಎಂದಿನಂತೆ ಕೆಜಿ ಮಟನ್‌ಗೆ 900 ರುಪಾಯಿಯಂತೆ ಮಾರಾಟ ಮಾಡಲಾಯಿತು. ಜನರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದರು.ಗಂಟೆಗಟ್ಟಲೆ ಕಾದು ಖರೀದಿ
ಕುರುಬರಹಳ್ಳಿಯ ಮಾರುತಿ ಮಟನ್ ಸ್ಟಾಲ್‌ನಲ್ಲಿ ಸಿಗುವ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು ಜನರು ಬೆಳಿಗ್ಗೆಯಿಂದಲೇ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಕೆಜಿ ಮಟನ್‌ಗೆ 900 ರುಪಾಯಿಯಂತೆ ಖರೀದಿಸಿದರು. ನಗರದ ಹಲವು ಮಟನ್ ಸ್ಟಾಲ್‌ಗಳಲ್ಲೂ ಜನರ ಸರದಿ ಸಾಲು ಕಂಡುಬಂದಿದ್ದು, ನಗರದ ಕೆಲವೆಡೆ ಗುಡ್ಡೆ ಮಾಂಸವೂ ಮಾರಾಟವಾಯಿತು.ಸ್ಕಿನ್‌ಔಟ್ ಮಾರಾಟಕ್ಕೆ ಒತ್ತು
ಅನಿಲ ಸಿಲಿಂಡರ್ ಅಭಾವದಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟ ಅನುಭವಿಸಿದ ಬೆನ್ನಲ್ಲೇ ಇದೀಗ ಕೋಳಿ ಮಾರಾಟಗಾರರೂ ಸಮಸ್ಯೆ ಎದುರಿಸುವಂತಾಗಿದೆ.ಪರಿಣಾಮವಾಗಿ ಅಂಗಡಿಗಳಲ್ಲಿ ಸ್ಕಿನ್‌ಔಟ್ ಚಿಕನ್ ಮಾರಾಟಕ್ಕೆ ಒತ್ತು ನೀಡಲು ಕೋಳಿ ಅಂಗಡಿ ಮಾರಾಟಗಾರರು ಮುಂದಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಚಿಕನ್ ವಿತ್ ಸ್ಕಿನ್ ಮಾರಾಟ ಕಡಿತಗೊಳಿಸಲು ಚಿಂತನೆ ನಡೆಸಿದ್ದು ಸ್ಕಿನ್‌ಔಟ್ ಮಾರಾಟಕ್ಕೆ ಆದ್ಯತೆ ನೀಡಲು ಕೆಲವೆಡೆ ನಿರ್ಧರಿಸಲಾಗಿದೆ.