ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಸಮೀಪದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ನಾಲ್ಕು ಪಥದ ಹೊಸ ಲಿಂಕ್ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಸಮೀಪದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ನಾಲ್ಕು ಪಥದ ಹೊಸ ಲಿಂಕ್ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ.ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್ (ನೈಸ್) ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ, ಹೊಸ ಲಿಂಕ್ ರಸ್ತೆಯನ್ನು ಉದ್ಘಾಟಿಸಿದರು. ಈ ಹೊಸದಾದ 1.5 ಕಿ.ಮೀ ಉದ್ದದ ಲಿಂಕ್ ರಸ್ತೆಯು ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜಿಗೆ ಹತ್ತಿರವಿರುವ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರು ನಗರದೊಳಗಿನಿಂದ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆಗಳಿಗೆ ಸಂಪರ್ಕವನ್ನು ಸುಲಭಗೊಳಿಸಿದೆ.
ಈ ಹಿಂದೆ ಮೆಜೆಸ್ಟಿಕ್, ವಿಜಯನಗರ, ಸ್ಯಾಟಲೈಟ್ ಬಸ್ ನಿಲ್ದಾಣ ಕಡೆಯಿಂದ ಬರುವ ಪ್ರಯಾಣಿಕರು ದೀಪಾಂಜಲಿ ನಗರ ಮೂಲಕ ನಾಯಂಡಹಳ್ಳಿ ಜಂಕ್ಷನ್ ತಲುಪಿ ಅಲ್ಲಿಂದ ರಿಂಗ್ ರಸ್ತೆಯ ಮೂಲಕ ನೈಸ್ ರಸ್ತೆಗೆ ಪ್ರವೇಶಿಸಬೇಕಾಗಿತ್ತು. ಜೊತೆಗೆ ನಾಯಂಡಹಳ್ಳಿ ಮತ್ತು ವೀರಭದ್ರನಗರ ಸಿಗ್ನಲ್‌ಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಬೇಕಿತ್ತು. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇ, ಕೆಂಗೇರಿ ಕಡೆ ಹೋಗುವವರು, ನೈಸ್ ರಸ್ತೆಗೆ ಬರುವ ಬದಲು ಅನಿವಾರ್ಯವಾಗಿ ಮೈಸೂರು ರಸ್ತೆಯಲ್ಲಿಯೇ ಸಾಗಬೇಕಿತ್ತು.ಹೊಸ ಲಿಂಕ್ ರಸ್ತೆಯಿಂದ ವಾಹನ ಸವಾರು ಕೇವಲ ಒಂದೆರಡು ನಿಮಿಷಗಳಲ್ಲಿ ದೀಪಾಂಜಲಿ ನಗರದಿಂದ ನೈಸ್ ಟೋಲ್ ಗೇಟ್ ತಲುಪಬಹುದಾಗಿದೆ. ಇದರಿಂದಾಗಿ ದೀರ್ಘಕಾಲದ ದಟ್ಟಣೆಯನ್ನು ತಪ್ಪಿಸಲು ಅನುಕೂಲವಾಗಿದೆ. ಈ ಸಂಪರ್ಕ ಹಲವು ಜನದಟ್ಟಣೆಯ ಜಂಕ್ಷನ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಿದೆ. ಈ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದ್ದರಿಂದ ಪಶ್ಚಿಮ ಹಾಗೂ ದಕ್ಷಿಣ ಬೆಂಗಳೂರಿನ ಜನರಿಗೆ ಪೀಕ್ ಅವಧಿಯಲ್ಲಿ 20 ನಿಮಿಷಗಳಷ್ಟು ಪ್ರಯಾಣದ ಸಮಯವು ಉಳಿತಾಯವಾಗುತ್ತದೆ.
ಟೋಲ್ ಇರಲಿದೆ:ಅಲ್ಲದೇ, ನಗರದ ಕೇಂದ್ರ ಭಾಗದಿಂದ ಪ್ರಮುಖ ಹೆದ್ದಾರಿಗಳಿಗೆ ಹೋಗುವ ವಾಹನ ಸವಾರರು ಎದುರಿಸುತ್ತಿದ್ದ ಟ್ರಾಫಿಕ್ ಕಿರಿಕಿರಿಯನ್ನು ಇದು ಕಡಿಮೆ ಮಾಡಿದೆ. ಈ ರಸ್ತೆಯು ಟೋಲ್ ಆಧಾರಿತವಾಗಿದ್ದು, ಟ್ರಾಫಿಕ್ ಇಲ್ಲದೆ ವೇಗವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ. ವಿಜಯನಗರ, ಬಾಪೂಜಿ ನಗರ, ಬ್ಯಾಟರಾಯನಪುರ, ಮೆಜೆಸ್ಟಿಕ್ ಮತ್ತು ಕೆ.ಆರ್. ಮಾರುಕಟ್ಟೆಯಿಂದ ಬರುವ ಪ್ರಯಾಣಿಕರಿಗೆ ಸುಗಮ ಪ್ರವೇಶವನ್ನು ನೀಡಲಾಗಿದೆ.