ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಈದುಲ್ ಫಿತ್ರ್ ಅನ್ನು ರಾಜ್ಯಾದ್ಯಂತ ಶನಿವಾರ ಆಚರಿಸುತ್ತಿದ್ದು ನಗರದಲ್ಲಿ ಶುಕ್ರವಾರ ಹಬ್ಬಕ್ಕೆ ಭರದ ಸಿದ್ಧತೆ ಕೈಗೊಂಡಿದ್ದು ಕಂಡುಬಂತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಈದುಲ್ ಫಿತ್ರ್ ಅನ್ನು ರಾಜ್ಯಾದ್ಯಂತ ಶನಿವಾರ ಆಚರಿಸುತ್ತಿದ್ದು ನಗರದಲ್ಲಿ ಶುಕ್ರವಾರ ಹಬ್ಬಕ್ಕೆ ಭರದ ಸಿದ್ಧತೆ ಕೈಗೊಂಡಿದ್ದು ಕಂಡುಬಂತು.ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಖರೀದಿ ಜೋರಾಗಿದ್ದು, ಜನರು ಸಂಭ್ರಮದಿಂದ ಶಾಪಿಂಗ್‌ನಲ್ಲಿ ತೊಡಗಿದ್ದರು. ಸಿಹಿ ತಿನಿಸು, ಹೊಸ ವಸ್ತ್ರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗಿದ್ದುದು ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ಬೆನ್‌ಸನ್ ಟೌನ್ ಮತ್ತಿತರ ಭಾಗಗಳಲ್ಲಿ ಕಂಡುಬಂದಿತು.
ಪ್ರಾರ್ಥನೆ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ, ಶಿವಾಜಿನಗರ, ಗೋರಿಪಾಳ್ಯ, ಗಂಗೊಂಡನಹಳ್ಳಿ, ಬಾಪೂಜಿನಗರ, ಆರ್.ಟಿ.ನಗರ ಸೇರಿದಂತೆ ನಗರದ ಹಲವೆಡೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಬೆನ್‌ಸನ್ ಟೌನ್‌ನ ಮಿಲ್ಲರ್ಸ್ ರಸ್ತೆಯ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಹಿಂಭಾಗದ ಮಸ್ಜಿದ್ ಇ ಖಾದ್ರಿಯಾದಲ್ಲಿ ಶನಿವಾರ ಬೆಳಿಗ್ಗೆ 9.45 ಕ್ಕೆ ಆಯೋಜಿಸಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.