ಕನ್ನಡಪ್ರಭ ವಾರ್ತೆ ಭಾಲ್ಕಿ
ಸಮಾಜ ಪರಿವರ್ತನೆಗೆ ನಾಟಕ ಸಹಕಾರಿಯಾಗಿವೆ. ಮೌಲ್ಯಯುತ ಸಂದೇಶ ಸಾರುವ ನಾಟಕ ಇಂದಿನ ಅಗತ್ಯ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನ, ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಲ್ಯಾಣದ ಬಾಗಿಲು ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿರೇಮಠ ಸಂಸ್ಥಾನ ಹಿಂದಿನಿಂದಲೂ ಕಲೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹ ತುಂಬುವ ಕೆಲಸ ಮಾಡುತ್ತಿದೆ. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರಿಗೆ ನಾಟಕದ ಬಗ್ಗೆ ಎಲ್ಲಿಲ್ಲದ ಪ್ರೀತಿ ಇದೆ. ನಾಟಕ, ಕಲೆಗಳಿಗೆ ಸದಾ ಗೌರವಿಸುತ್ತ ಬರುತ್ತಿದ್ದಾರೆ.
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಅವರು ಸಮಾಜದಲ್ಲಿನ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಭಿನ್ನ ನಾಟಕ ರಚಿಸಿ ಸಮಾಜಕ್ಕೆ ಸಮರ್ಪಣೆ ಮಾಡುತ್ತಿರುವುದು ಮಾದರಿ ಎನಿಸಿದೆ. ಎಲ್ಲರೂ ಹೆಚ್ಚೆಚ್ಚು ನಾಟಕಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಬಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಿವಕುಮಾರ ಕಲ್ಯಾಣೆ, ಸಾಹಿತಿ ಡಾ.ಕಾಶಿನಾಥ ಚಲುವಾ, ಪ್ರಮುಖರಾದ ಓಂಕಾರ ಸೂರ್ವವಂಶಿ, ಯಶ್ವಂತ ಭೋಸ್ಲೆ, ಮಡಿವಾಳಯ್ಯ ಸ್ವಾಮಿ, ಸುಭಾಷ ಕಾರಾಮುಂಗೆ, ಸಿಕ್ರೇಶ್ವರ ಶೆಟಕಾರ, ಅಶೋಕ ಬಾವುಗೆ, ಅನಿಲ ಹಾಲಕೂಡೆ, ತಿಪ್ಪಣ್ಣ ಶಿವಪೂರೆ, ಶಕುಂತಲಾ ಆರ್ ಬಚ್ಚಣ್ಣ, ಮಹಾನಂದಾ ದೇಶಮುಖ ಸೇರಿದಂತೆ ಹಲವರು ಇದ್ದರು. ರಾಜು ಜುಬರೆ ವಚನ ಪ್ರಾರ್ಥನೆ ನಡೆಸಿ ಕೊಟ್ಟರು. ಆರತಿ ಪಾತ್ರೆ ನಿರೂಪಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಮಠದಿಂದ ಸನ್ಮಾನಿಸಲಾಯಿತು.
ಸಿಂಡಿಕೇಟ್ ಸದಸ್ಯ ಬಸವರಾಜ ಭತಮೂರ್ಗೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜುಕುಮಾರ ಅತಿವಾಳೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತೊಂದು ಸದಸ್ಯೆ ವಿಜಯಲಕ್ಷ್ಮಿ ಕೌಟಗೆ, ಬಂಜಾರಾ ಅಕಾಡೆಮಿ ಸದಸ್ಯೆ ಭಾರತಿಬಾಯಿ ಖೂಬಾ ಅವರನ್ನು ಪೂಜ್ಯರು ಸನ್ಮಾನಿಸಿ, ಅಭಿನಂದಿಸಿದರು.