ಏ.4 ಕ್ಕೆ ಬೃಹತ್ ರ್‍ಯಾಲಿಯೊಂದಿಗೆ ಉಮೇದುದಾರಿಕೆ । ಎಲ್ಲ ಶಾಸಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ
ಕನ್ನಡಪ್ರಭ ವಾರ್ತೆ ಹಾಸನ೨೦೨೪ರ ಲೋಕಸಭೆಯ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಗುರುವಾರ ಶಾಸಕರಾದ ಎಚ್.ಡಿ. ರೇವಣ್ಣ, ಸಿ.ಎನ್.ಬಾಲಕೃಷ್ಣ, ಎಚ್.ಪಿ. ಸ್ವರೂಪ್, ಎ.ಮಂಜು ಅವರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ನಾಮಪತ್ರ ಸಲ್ಲಿಸಿದರು.
ಶಾಸಕರಾದ ಎ. ಮಂಜು ಮತ್ತು ಸಿ.ಎನ್.ಬಾಲಕೃಷ್ಣ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಸಮಯ ನಿಂತು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಗಮಿಸಿದ ಬಳಿಕ ಅವರ ಜತೆ ಸೇರಿದರು. ನಂತರದಲ್ಲಿ ಚಪ್ಪಲಿ ಹಾಕದೇ ಬರಿಗಾಲಿನಲ್ಲಿ ಬಂದ ಮಾಜಿ ಸಚಿವ ಎಚ್.ಡಿ. ರೇವಣ್ಣ ಕಚೇರಿ ಒಳ ಪ್ರವೇಶ ಮಾಡಿದರು. ಇದಕ್ಕೆ ಮೊದಲು ಗುರುವಾರ ಬೆಳಗಿನಿಂದಲೇ ಮಾವಿನಕೆರೆ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ ಪ್ರಜ್ವಲ್ ಅವರು ಶಾಸಕರಾದ ಬಾಲಕೃಷ್ಣ ಹಾಗೂ ಎ.ಮಂಜು ಕಾಲಿಗೆರಗಿ ಆಶೀರ್ವಾದ ಪಡೆದರು.ಇದಕ್ಕೂ ಮೊದಲು ಹರದನಹಳ್ಳಿಯಲ್ಲಿದ್ದ ಅಭ್ಯರ್ಥಿಯಾದ ಅಜ್ಜ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಸೂಚಕರ ಸಹಿ ಹಾಕಿಸಿಕೊಂಡು ಆಶೀರ್ವಾದ ಪಡೆದರು. ಗುರುವಾರ ಶುಭದಿನವೆಂಬ ಕಾರಣಕ್ಕಾಗಿ ಸರಳವಾಗಿ ನಾಮಪತ್ರವನ್ನು ಪ್ರಜ್ವಲ್ ರೇವಣ್ಣ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಕಚೇರಿ ಮುಂದೆ ಬಿ.ಎಂ.ರಸ್ತೆಯ ಒಂದು ಭಾಗದ ರಸ್ತೆ ಬಂದ್ ಮಾಡಿದ್ದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಯಾವುದೇ ಗೊಂದಲವಾಗದಂತೆ ಶಾಂತಿ ಕಾಪಾಡಲು ಜಿಲ್ಲಾಧಿಕಾರಿ ಕಚೇರಿ ಸುತ್ತ ೧೪೪ ಸೆಕ್ಷನ್ ಹಾಗೂ ೫ ಜನರು ಮಾತ್ರ ಅಭ್ಯರ್ಥಿ ಜೊತೆ ಬರಲು ನಿರ್ಬಂಧ ಹೇರಲಾಗಿತ್ತು. ಇನ್ನು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಜೊತೆ ಯಾವ ಜೆಡಿಎಸ್ ಕಾರ್ಯಕರ್ತರು ಆಗಮಿಸಿರಲಿಲ್ಲ.
ನಾಮಪತ್ರ ಸಲ್ಲಿಸಿದ ನಂತರ ಪ್ರಜ್ವಲ್ ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿ, ದೇವರ ಮತ್ತು ದೇವೇಗೌಡ, ಹಿರಿಯ ಶಾಸಕರ ಆಶೀರ್ವಾದದ ಜೊತೆ ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಾಗಿದೆ. ಏಪ್ರಿಲ್ ೪ ರಂದು ಬೃಹತ್ ಸಭೆ ಮತ್ತು ರ್‍ಯಾಲಿ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಮುಖಂಡರ ಹಾಗೂ ಈ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಹಲವಾರು ಜನ ಬಿಜೆಪಿ ಮುಖಂಡರು ಜತೆ ಸೇರಿ ದೊಡ್ಡ ಮಟ್ಟದ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಲಾಗುವುದು ಎಂದರು.ಅರಕಲಗೂಡು ಶಾಸಕರು, ಮಾಜಿ ಸಚಿ ಎ. ಮಂಜು, ಶಾಸಕ ಸಿಎನ್. ಬಾಲಕೃಷ, ಎಚ್.ಪಿ. ಸ್ವರೂಪ್ ಎಲ್ಲಾ ಸೇರಿ ನಾಮಪತ್ರವನ್ನು ಸಲ್ಲಿಸಲಾಗಿದೆ. ಏ.೪ ರಂದು ಜೆಡಿಎಸ್ ಮತ್ತು ಬಿಜೆಪಿಯ ಎಲ್ಲಾ ಮುಖಂಡರ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಲಾಗುವುದು. ಗುರುವಾರ ಒಳ್ಳೆಯ ದಿನವೆಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಎನ್.ಡಿ.ಎ. ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರು ಎಲ್ಲರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಏ.೪ ರಂದು ಬಿಜೆಪಿ ಪಕ್ಷದ ನಾಯಕರು ಹಾಗೂ ಜೆಡಿಎಸ್ ಪಕ್ಷದ ನಾಯಕರೊಂದಿಗೆ ನಾಮಪತ್ರ ಸಲ್ಲಿಸಲಾಗುವುದು. ಜಿಲ್ಲೆಯ ಎಲ್ಲ ನಾಗರಿಕರ ಆಶೀರ್ವಾದ ಪ್ರಜ್ವಲ್ ರೇವಣ್ಣರ ಮೇಲೆ ಇರಲಿ ಎಂದು ಕೋರಿದರು. ಜೆಡಿಎಸ್ ಶಾಸಕರೊಂದಿಗೆ ನಾಮಪತ್ರ ಸಲ್ಲಿಸಿ ಹೊರಬಂದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ.