ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿದ್ಯಾರ್ಥಿನಿಯರಿಗಾಗಿ ಉತ್ತಮ ಶಾಲೆ ತೆರೆಯಬೇಕೆಂಬ ಕನಸು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತೆರೆಯುವುದರ ಮೂಲಕ ನನಸಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ವಡ್ಡರಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಶಾಲೆ ಇರುವ ಜಾಗವನ್ನು ಅರಣ್ಯ ಇಲಾಖೆಯಿಂದ ವರ್ಗಾವಣೆಗೊಂಡು ಶಾಲೆ ನಿರ್ಮಾಣ ಮಾಡಿದ್ದ ವೇಳೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಹೆಣ್ಣು ಮಕ್ಕಳಿಗೆ ವಿಶೇಷ ಶಾಲೆ ತೆರೆಯುವ ಆಸೆ ಯಶ್ವಸಿಯಾಗಿದೆ ಎಂದರು.
ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು. ಸರ್ಕಾರದ ವ್ಯವಸ್ಥೆಯೊಂದಿಗೆ ಪೋಷಕರ ಸಹ ಪೂರಕವಾಗಿ ಸಹಕಾರ ನೀಡಬೇಕಿದೆ ಎಂದರು.ವಸತಿ ಶಾಲೆಯಲ್ಲಿ ಪದವಿ ಪೂರ್ವ ಕಾಲೇಜು ಮಂಜೂರಿಗೆ ಸದ್ಯದಲ್ಲಿಯೇ ಅನುಮೋದನೆ ಸಿಗಲಿದೆ. ವಸತಿ ಶಾಲೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತಾಲೂಕಿಗೆ ಕೀರ್ತಿ ತರಬೇಕೆಂದು ಹೇಳಿದರು.
ಹೆಚ್ಚುವರಿ ಕಟ್ಟಡ ನಿರ್ಮಾಣ ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗುವುದು. ಪಿಯುಸಿವರೆಗಿನ ಶಿಕ್ಷಣ ಕಲ್ಪಿಸಲು ಸರ್ಕಾರದಿಂದ ಅನುಮೋದನೆ ಪಡೆಯಲು ಮುಂದಾಗುತ್ತೇವೆ. ಜ್ಞಾನದ ಸೂರ್ಯ ನಿಮ್ಮ ಬಾಳಿನಲ್ಲಿ ಬೆಳಕು ನೀಡಲಿ ಎಂದು ಆಶಿಸಿದರು.ಪ್ರಾಂಶುಪಾಲ ಎಂ.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಸತಿ ಶಾಲೆಗೆ ಮೂಲ ಸೌಲಭ್ಯವನ್ನು ಕಲ್ಪಿಸಿಕೊಡುವಲ್ಲಿ ಶಾಸಕರ ಪಾತ್ರ ಅಪಾರವಾಗಿದೆ. ಶಾಸಕರ ಆಶಯದಂತೆ ಶೈಕ್ಷಣಿಕ ಪ್ರಗತಿಗೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ಕಳೆದ 4 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್ ಬೇವಿನಮಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಂದ್ರಪಾಟೀಲ್, ಗ್ರಾ.ಪಂ.ಅಧ್ಯಕ್ಷೆ ಚಲುವಮ್ಮ, ಉಪಾಧ್ಯಕ್ಷೆ ಉಮತಾಯಿ, ಸದಸ್ಯೆ ಭಾಗಮ್ಮ, ಸಹಕಾರ ಸಂಘದ ಅಧ್ಯಕ್ಷ ಮನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ಮುಖಂಡರಾದ ಆರ್.ಎನ್.ವಿಶ್ವಾಸ್, ಪುಟ್ಟಸ್ವಾಮಿ, ರೋಹಿತ್(ದೀಪು), ಬಂಕ್ ಮಹದೇವು, ಸಿ.ಪಿ.ರಾಜು ಇದ್ದರು.