ಕನ್ನಡಪ್ರಭ ವಾರ್ತೆ ಅಫಜಲ್ಪುರ
ಮುಂಗಾರು ಮಳೆ ವಿಳಂಬವಾಗಿರುವುದರಿಂದ ಕಳೆದ ವರ್ಷ ತಾಲೂಕಿನಲ್ಲಿ ರೈತರು ನಾಟಿ ಮಾಡಿರುವ ಸಾವಿರಾರು ಎಕರೆ ಕಬ್ಬು ಮತ್ತು ಬಾಳೆ ಮಳೆ ಇಲ್ಲದೆ ಒಣಗಿ ಹೋಗುತ್ತಿವೆ. ತಾಲೂಕಿನಲ್ಲಿ ರೈತರು ಕಳೆದ 10 ತಿಂಗಳಿಂದ ಹಸುಗೂಸಿನಂತೆ ಬಾಳೆ ಬೆಳೆ ಜೋಪಾನ ಮಾಡುತ್ತಿದ್ದರು.ಆದರೆ, ಕಳೆದ 3-4 ತಿಂಗಳಿಂದ ಅಂತರ್ಜಲ ಮಟ್ಟ ಪೂರ್ತಿಯಾಗಿ ಬತ್ತಿರುವುದರಿಂದ ಸುಮಾರು ಸಾವಿರಾರು ಎಕರೆ ಬಾಳೆ ಬೆಳೆಯನ್ನು ರೈತರು ಕಳೆದುಕೊಂಡತಾಗಿದೆ.ಬತ್ತಿದ ಬಾವಿಗಳು: ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಸಂಪೂರ್ಣವಾಗಿ ಬಾರದೆ ಇರುವುದರಿಂದ ಕೊಳವೆಬಾವಿ ಮತ್ತು ತೆರೆದ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ತೋಟದ ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಜನರು ಮೇವು ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಭೀಮಾ ಬ್ಯಾರೇಜ್ ಹಿನ್ನಿರನ್ನು ನಂಬಿಕೊಂಡು ತೋಟದ ಬೆಳೆ ಮಾಡಿಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮಳೆಬಾರದೆ ಇರುವುದರಿಂದ ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ಅಲ್ಪ ಸ್ವಲ್ಪ ಇರುವ ನೀರು ಕೂಡ ಕಡಿಮೆಯಾಗಿರುವುದರಿಂದ ಹಾಗೂ ತಾಲೂಕಿನಲ್ಲಿ ಭೀಮಾನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ತಾಲೂಕಿನ ಮಣ್ಣೂರ, ಶೇಷಗಿರಿ ಕುಡಗನೂರ ಶಿವೂರ, ಉಡಚಣ ಭಾಸಗಿ, ಹಿರಿಯಾಳ, ದುದ್ದುಣಗಿ ಮಂಗಳೂರ ಹಿರಿಯಾಳ ಅಳ್ಳಗಿ ಬಿ ಘತ್ತರಗಾ ಹಿಂಚಗೇರಾ ಹವಳಗಾ ದೇವಲ ಗಾಣಗಾಪುರ ಬಂದರವಾಡ ಹಸರಗುಂಡಗಿ, ಸಾಗನೂರ ಸೇರಿದಂತೆ ಭೀಮಾ ನದಿ ದಡದಲ್ಲಿರುವ ಹಲವಾರು ಗ್ರಾಮಗಳಲ್ಲಿ ರೈತರು ಬೆಳೆದಿರುವ ಸಾವಿರಾರು ಎಕರೆ ಕಬ್ಬು ಒಣಗುತ್ತಿದೆ ಎಂದು ಅಲ್ಲಿನ ರೈತರಾದ ಸಂತೋಷ ಅವಟೆ ಕಾಶೀನಾಥ ಜೇವೂರ ಮಹ್ಮದಕರಿಂ ಮಂಗಲಗಿರಿ ವಿಠ್ಠಲ ಅಲ್ಲಾಪೂರ ದುಂಡಪ್ಪ ಅಲ್ಲಾಪೂರ ಚಂದ್ರಶೇಖರ ಹೊಸೂರಕರ ಮಲಕಣ್ಣ ಹೊಸೂರಕರ ನೋವಿನಿಂದ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಅಂತರ್ಜಲ ಬತ್ತಿ ಹೋಗಿರುವುದರಿಂದ ಒಣಗಿ ಹೋಗಿರುವ ಕಬ್ಬು ಮತ್ತು ಬಾಳೆ ಬೆಳೆಗಳನ್ನು ಸಂಭಂದಿಸಿದ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಬೇಕು ಹಾಗೂ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ.