ಕನ್ನಡಪ್ರಭ ವಾರ್ತೆ ಪಾಂಡವಪುರ
ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಹೈಕೋರ್ಟ್ ಆದೇಶದಂತೆ ಟ್ರಯಲ್ ಬ್ಲಾಸ್ಟ್ ನಡೆಸಲು ಗಣಿ ಅಧಿಕಾರಿಗಳಿಂದ ನಡೆಯುತ್ತಿರುವ ಡ್ರಿಲ್ಲಿಂಗ್ ಯಂತ್ರದ ಮೂಲಕ ಕುಳಿ ಕೊರೆಯುವ ಕಾರ್‍ಯವು ಗುರುವಾರವು ಮುಂದುವರೆಯಿತು.ಟ್ರಯಲ್ ಬ್ಲಾಸ್ಟ್ ನಡೆಸಲು ಆಗಮಿಸಲಿರುವ ಜಾರ್ಖಂಡ್ ರಾಜ್ಯದ ಧನ್‌ಭಾಗ್‌ನ ಸೆಂಟ್ರಲ್ ಇನ್ಸ್‌ಟಿಟ್ಸೂಟ್ ಆಫ್ ಮೈನಿಂಗ್ ಆಂಡ್ ಫ್ಯೂಯಲ್ ರೀಸರ್ಚ್ ಸಂಸ್ಥೆ ವಿಜ್ಞಾನಿಗಳ ತಂಡ ಸೂಚಿಸಿರುವಂತೆ ಆಯ್ದ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಡ್ರಿಲ್ಲಿಂಗ್ ಯಂತ್ರದ ಮೂಲಕ ಕುಳಿ ಕೊರೆಸಲಾಗುತ್ತಿದೆ.
ಬುಧವಾರ ಕೆಆರ್‌ಎಸ್ ಅಣೆಕಟ್ಟೆಯಿಂದ 5.8 ಕಿಮೀ ವ್ಯಾಪ್ತಿಯ ದೂರದಲ್ಲಿರುವ ಸರ್ವೇ.01ರ ಗಣಿಗಾರಿಕೆ ಪ್ರದೇಶದಲ್ಲಿ ಸುಮಾರು 20 ಅಡಿ ಆಳದ ವರೆಗೆ ಕುಳಿ ಕೊರೆಸಿದರು. ಗುರುವಾರ ಸರ್ವೇ ನಂ 2ರ, ಎಸ್‌ಎಲ್‌ವಿ, ಎಸ್‌ಟಿಜಿ ಹಾಗೂ ಶ್ರೀರಾಮಲಿಂಗೇಶ್ವರ ಕ್ವಾರೆ ಪ್ರದೇಶದಲ್ಲಿ ಕುಳಿ ಕೊರೆಸುವ ಕಾರ್‍ಯ ನಡೆಸಿದರು.ಡ್ರಿಲ್ಲಿಂಗ್ ಯಂತ್ರದ ಮೂಲಕ ಕಲ್ಲು ಬಂಡೆಗಳ ಮೇಲೆ ಕುಳಿ ಕೊರೆಸುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರವೂ ಸಹ ಕುಳಿ ಕೊರೆಸುವ ಕಾರ್‍ಯ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಗಣಿ ಅಧಿಕಾರಿ ನಾಗಮಧು ತಿಳಿಸಿದರು.
ಟ್ರಯಲ್ ಬ್ಲಾಸ್ಟ್ ನಡೆಸುವ ಜಾರ್ಖಾಂಡ್‌ನ ಧನ್‌ಭಾಗ್‌ನ ಸೆಂಟ್ರಲ್ ಇನ್ಸ್‌ಟಿಟ್ಸೂಟ್ ಆಫ್ ಮೈನಿಂಗ್ ಆಂಡ್ ಫ್ಯೂಯಲ್ ರೀಸರ್ಚ್ ಸಂಸ್ಥೆಯ ವಿಜ್ಞಾನಿಗಳು ಶನಿವಾರ ಅಥವಾ ಭಾನುವಾರ ಆಗಮಿಸುವ ಸಾಧ್ಯತೆಗಳಿವೆ. ವಿಜ್ಞಾನಿಗಳು ಬಂದ ಬಳಿಕ ಬೇಬಿಬೆಟ್ಟದ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ಸಾಧ್ಯತೆಗಳಿವೆ.ಬಿಗಿ ಪೊಲೀಸ್ ಬಂದೂಬಸ್ತ್:
ಬೇಬಿಬೆಟ್ಟದ ಕಲ್ಲಿಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಪರ-ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಕ್ರವಾರವೂ ಸಹ ಪೊಲೀಸರ ಬಿಗಿಬಂದೋಬಸ್ತ್‌ನಲ್ಲಿ ಕುಳಿ ಕೊರೆಸುವ ಕಾರ್‍ಯವನ್ನು ನಡೆಸಿದರು. ಕೆಆರ್‌ಎಸ್ ಹಾಗೂ ಪಾಂಡವಪುರದಿಂದ ಗಣಿಗಾರಿಕೆ ಪ್ರದೇಶಕ್ಕೆ ಬರುವ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೂಬಸ್ತ್ ನಿಯೋಜಿಸಲಾಗಿತ್ತು.ಗೋ ಬ್ಯಾಕ್ ಪ್ರತಿಭಟನೆ ಸಾಧ್ಯತೆ:
ವಿಜ್ಞಾನಿಗಳು ಟ್ರಯಲ್ ಬ್ಲಾಸ್ಟ್ ನಡೆಸದಂತೆ ರೈತಸಂಘದ ಕಾರ್‍ಯಕರ್ತರು ಗೋ-ಬ್ಯಾಕ್ ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ. ಈ ಹಿಂದೆಯೂ ಸಹ ಟ್ರಯಲ್ ಬ್ಲಾಸ್ಟ್ ಮಾಡಲು ಬಂದಿದ್ದ ಗಣಿ ವಿಜ್ಞಾನಿಗಳಿಗೆ ಗೋ-ಬ್ಯಾಕ್ ಚಳವಳಿ ನಡೆಸಿ ವಾಪಸ್ ಕಳುಹಿಸುವಲ್ಲಿ ರೈತಸಂಘ ಯಶಸ್ವಿಯಾಗಿತ್ತು.ಅದರಂತೆ ಈ ಬಾರಿ ಗೋ-ಬ್ಯಾಕ್ ಚಳವಳಿ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಮತ್ತೊಂದಡೆ ಹೈಕೋರ್ಟ್ ಆದೇಶದಂತೆ ಟ್ರಯಲ್ ಬ್ಲಾಸ್ಟ್ ನಡೆಸಿ ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ ಇದೆಯೋ?, ಇಲ್ಲವೋ? ಎನ್ನುವ ಸಾಧಕ ಬಾಧಕಗಳನ್ನು ತಿಳಿದುಕೊಳ್ಳುವುದಕ್ಕಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಅವಕಾಶ ನೀಡಬೇಕೆಂದು ರೈತ ಸಂಘದ (ರೈತಬಣದ) ಕಾರ್‍ಯಕರ್ತರು ಹಾಗೂ ಕಾವೇರಿಪುರ ಸೇರಿದಂತೆ ಸುತ್ತಮುತ್ತಲಿನ ಕ್ವಾರೆ ಕಾರ್ಮಿಕರು ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ.
ಹೈಕೋರ್ಟ್ ಆದೇಶ ಮಾಡಿರುವುದರಿಂದ ಟ್ರಯಲ್ ಬ್ಲಾಸ್ ನಡೆಸಿದಿದ್ದರೆ ಕೋರ್ಟ್ ಆದೇಶ ಉಲ್ಲಂಘನೆಯಾಗಲಿದೆ ಎಂಬ ಕಾರಣಕ್ಕೂ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು ಎಲ್ಲಾ ಸಿದ್ಧತೆಗಳನ್ನು ಬ್ಲಾಸ್ಟ್ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತ್ತಿಲ್ಲ.