ದೇಹ ಕೇಳಿದಷ್ಟು ಮಾತ್ರ ನೀರು ಕುಡಿಯಿರಿ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 18, 2026, 02:30 AM IST
ಶ್ರೀಗಳು ಆರ್ಶೀವಚನ ನೀಡುತ್ತಿರುವುದು  | Kannada Prabha

ಸಾರಾಂಶ

ಪ್ರಾಣ ಇರುವ ಎಲ್ಲರಿಗೂ ನೀರೇ ಪ್ರಾಣವಾಗಿದ್ದು, ದೇಹ ಕೇಳಿದಾಗ ಹಾಗೂ ಕೇಳಿದಷ್ಟು ಮಾತ್ರ ನೀರನ್ನು ಕುಡಿಯಬೇಕು ಎಂಬುದು ಆಯುರ್ವೇದದ ಆಚಾರ್ಯರ ಅಭಿಮತವಾಗಿದ್ದು, ನೀರನ್ನು ಇಷ್ಟೇ ಕುಡಿಯಬೇಕು ಎಂಬ ಪ್ರಮಾಣ ಆಯುರ್ವೇದದಲ್ಲಿ ಇಲ್ಲ.

ಗೋಕರ್ಣ: ನೀರನ್ನು ದೇಹಕ್ಕೆ ಬೇಕಾದಾಗ ಕುಡಿಯಬೇಕು ಹೊರತು ಮನಸ್ಸಿಗೆ ಬೇಕಾದಾಗ ಕುಡಿಯುವುದಲ್ಲ. ಅನಗತ್ಯವಾಗಿ ಆಗಾಗ ನೀರನ್ನು ಕುಡಿಯುವ ಹವ್ಯಾಸ ಸರಿಯಲ್ಲ ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಗುರುವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ನೀರಿನ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಜೀವನದಲ್ಲಿ ಯಾವುದು ಹೆಚ್ಚು ಅಥವಾ ಕಡಿಮೆ ಆದರೂ ಅನರ್ಥವೇ ಆಗುವುದು. ಹಾಗೆಯೇ ಹೆಚ್ಚಿನ ನೀರು ಹಾಗೂ ಕಡಿಮೆ ನೀರು ಸೇವನೆಯಿಂದ ಅನರ್ಥವೇ ಆಗುತ್ತದೆ. ನೀರನ್ನು ಹೆಚ್ಚಾಗಿ ಕುಡಿದಾಗ ಸರಿಯಾಗಿ ಸೇವಿಸಿದ ಆಹಾರವೂ ಸಮರ್ಪಕವಾಗಿ ಜೀರ್ಣವಾಗುವುದಿಲ್ಲ. ಹೆಚ್ಚಾಗಿ ನೀರು ಕುಡಿಯುವುದು ಎಲ್ಲ ರೀತಿಯ ಅನಾರೋಗ್ಯಕ್ಕೆ ಮೂಲವಾಗಬಹುದು. ಅಸಮರ್ಪಕವಾಗಿ ಸೇವಿಸಿದ ಔಷಧ, ಆಹಾರದಂತೆ ನೀರಿನಿಂದಲೂ ಅಡ್ಡಪರಿಣಾಮವಿದ್ದು, ನೀರನ್ನು ಸಮರ್ಪಕವಾಗಿ ಸೇವಿಸಬೇಕು ಎಂದು ಎಚ್ಚರಿಸಿದರು.

ಪ್ರಾಣ ಇರುವ ಎಲ್ಲರಿಗೂ ನೀರೇ ಪ್ರಾಣವಾಗಿದ್ದು, ದೇಹ ಕೇಳಿದಾಗ ಹಾಗೂ ಕೇಳಿದಷ್ಟು ಮಾತ್ರ ನೀರನ್ನು ಕುಡಿಯಬೇಕು ಎಂಬುದು ಆಯುರ್ವೇದದ ಆಚಾರ್ಯರ ಅಭಿಮತವಾಗಿದ್ದು, ನೀರನ್ನು ಇಷ್ಟೇ ಕುಡಿಯಬೇಕು ಎಂಬ ಪ್ರಮಾಣ ಆಯುರ್ವೇದದಲ್ಲಿ ಇಲ್ಲ. ಆಧುನಿಕ ವಿಜ್ಞಾನಕ್ಕೂ ಆಯುರ್ವೇದಕ್ಕೂ ನೀರಿನ ಸೇವನೆಯ ವಿಚಾರದಲ್ಲಿ ವ್ಯತ್ಯಾಸವಿದ್ದು, ವ್ಯಕ್ತಿಯ ತೂಕವನ್ನು ಆಧರಿಸಿ ನೀರಿನ ಪ್ರಮಾಣವನ್ನು ಆಧುನಿಕ ಪದ್ಧತಿ ಸೂಚಿಸುತ್ತದೆ. ಆದರೆ ಅದು ವ್ಯಕ್ತಿಯ ದೇಹ ಪ್ರಕೃತಿ ಹಾಗೂ ಜಠರಾಗ್ನಿಯ ಸಾಮರ್ಥ್ಯವನ್ನು ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಊಟಕ್ಕಿಂತ ಮೊದಲು ನೀರನ್ನು ಸೇವಿಸಿದರೆ ಅದು ಅಜೀರ್ಣಕ್ಕೆ ಕಾರಣ ಹಾಗೂ ಊಟದ ಕೊನೆಯಲ್ಲಿ ಸೇವಿಸಿದರೆ ಅದು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಊಟದ ಮಧ್ಯ ಮಧ್ಯದಲ್ಲಿ ಸೇವಿಸಿದ ನೀರು ದೇಹಕ್ಕೆ ಹಿತ ಎಂಬುದು ಆಯುರ್ವೇದ ಗ್ರಂಥಗಳ ಸಾರವಾಗಿದ್ದು, ನೀರನ್ನು ಗುಟುಕು ಗುಟುಕಾಗಿ ಘನಾಹಾರವನ್ನು ತಿನ್ನುವಂತೆ ನಿಧಾನವಾಗಿ ಕುಡಿಯಬೇಕು. ಪರಂಪರೆ ಹೇಳುವಂತೆ ನಿಂತು ಕುಡಿದ ನೀರು ರಾಜಸ ಗುಣವನ್ನು ಹೆಚ್ಚಿಸಿದರೆ, ಮಲಗಿ ಕುಡಿದರೆ ತಮೋ ಗುಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗೂ ಸರಿಯಾಗಿ ಕುಳಿತು ಕುಡಿದ ನೀರು ಸತ್ವ ಗುಣದ ವೃದ್ಧಿಗೆ ಕಾರಣ. ಹಾಗಾಗಿ ನೀರನ್ನು ಕುಳಿತೇ ಸೇವಿಸಬೇಕು. ಸರಿಯಾಗಿ ಸೇವಿಸಿದ ನೀರು ಅಮೃತ ಎಂದು ತಿಳಿಸಿದರು.

ಶ್ರೀರಾಮ ಕೆ.ಟಿ. ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ರಾಮಮೂರ್ತಿ ಹೆದ್ಲಿ ದಂಪತಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಅಲೆದಾಟ ತಪ್ಪಿಸಲು ಪ್ರಜಾಸೇವೆ ಆಂದೋಲನ: ಶಾಸಕ ಆರ್.ವಿ. ದೇಶಪಾಂಡೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆತ್ಮಾವಲೋಕನ ಅಗತ್ಯ