ಹಾನಗಲ್ಲ ತಾಲೂಕಿನಲ್ಲಿ 119 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ ಬಹುತೇಕ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ.
ಮಾರುತಿ ಶಿಡ್ಲಾಪೂರ
ಹಾನಗಲ್ಲ: ಬಿಸಿಲ ಧಗೆ ಏರುತ್ತಿದೆಯಾದರೂ ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಇಲ್ಲ. 53 ಗ್ರಾಮಗಳಿಗೆ ಕೊರತೆಯಾದೀತು ಎಂಬ ಎಚ್ಚರಿಕೆ ಇದೆ. ಇದಕ್ಕಾಗಿ ಖಾಸಗಿ ಕೊಳವೆ ಬಾವಿ ಗುರುತಿಸಲಾಗಿದೆ. ತಾಲೂಕಿನ 119ರಲ್ಲಿ 14 ಶುದ್ಧ ಕುಡಿಯುವ ನೀರಿನ ಘಟಕಗಳೂ ಕಾರ್ಯ ನಿರ್ವಹಿಸುತ್ತಿಲ್ಲ.166 ಹಳ್ಳಿಗಳನ್ನೊಳಗೊಂಡ ರಾಜ್ಯದ ಅತಿ ದೊಡ್ಡ ಹಾನಗಲ್ಲ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕುಡಿಯುವ ನೀರಿನ ಕೊರತೆಯಾಗಿ ಹಾಹಾಕಾರ ಎದುರಿಸಿದ ಭಯ ಈಗಲೂ ಅಧಿಕಾರಿಗಳಿಗೆ ಇದೆ. ಆದರೆ ಕಳೆದ ವರ್ಷ ಬಿದ್ದ ಭರಪೂರ ಮಳೆ ಕಾರಣದಿಂದ ಅಂತರ್ಜಲ ಮರುಪೂರಣ ಆಗಿರುವುದರಿಂದ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯಾಗಲಿಕ್ಕಿಲ್ಲ ಎಂಬ ಭರವಸೆ ಇದೆ. ಆದರೂ ತಾಲೂಕಿನ 53 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಆದೀತು ಎಂಬ ಕಾರಣಕ್ಕೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಇದಕ್ಕಾಗಿ ಹೊಸ 24 ಕೊಳವೆ ಬಾವಿ ಕೊರೆಯಲು, 19 ಕೊಳವೆಬಾವಿ ಆಳಗೊಳಿಸುವ, ಸ್ವಚ್ಛಗೊಳಿಸುವ ಕಾರ್ಯಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ತಾಲೂಕಿನಲ್ಲಿ 119 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ ಬಹುತೇಕ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಇಲಾಖೆ ವರದಿಯಂತೆ 14 ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. 36 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. 69 ಘಟಕಗಳನ್ನು 4 ಏಜೆನ್ಸಿಗಳು ನಿರ್ವಹಿಸುತ್ತಿವೆ.ತಡಸ ಹಾಗೂ ಇತರೆ ಬಹುಗ್ರಾಮ ಕುಡಿಯುವ ನೀರಿನ ಘಟಕದ ಕಾಮಗಾರಿ ನಡೆದಿದ್ದು, ಇದರಿಂದ ಹಾನಗಲ್ಲ ತಾಲೂಕಿನ 112 ಗ್ರಾಮಗಳಿಗೆ ಕೊರತೆ ಇಲ್ಲದಂತೆ ಕುಡಿಯುವ ನೀರು ಒದಗಿಸಲು ಸಾಧ್ಯ ಎಂಬ ಸಾಧ್ಯತೆಯನ್ನು ಅಧಿಕಾರಿಗಳು ಹೇಳುತ್ತಾರೆ. ಆದರೆ ಇದು ಯಾವಾಗ ಮುಗಿಯುತ್ತದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ತಾಲೂಕಿನಲ್ಲಿ 165 ಗ್ರಾಮಗಳಿಗೆ ಜಲಜೀವನ ಮಿಷನ್‌ನ ಕುಡಿಯುವ ನೀರು ಪೂರೈಕೆ ಮೀಟರ್ ಮೂಲಕದ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ ಇವುಗಳ ನಿರ್ವಹಣೆ ಮಾತ್ರ ತೃಪ್ತಿಕರವಾಗಿಲ್ಲ. ಈ ಯೋಜನೆಯಲ್ಲಿ ಫಲಾನುಭವಿಗಳಿಂದ ಕರ ಆಕರಣೆ ಮಾಡಬೇಕೆಂಬ ನಿಯಮವಿದೆ. ಆದರೆ ತಾಲೂಕಿನ ಎಲ್ಲಿಯೂ ಕರ ಆಕರಣೆ ಆಗುತ್ತಿಲ್ಲ. ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ 248 ಮೇಲ್ಮಟ್ಟದ ಜಲಾಗಾರಗಳು 17 ಭೂಮಿ ಮಟ್ಟದ ಜಲಾಗಾರಗಳು, 805 ಕೊಳವೆ ಬಾವಿಗಳಿವೆ. ತಾಲೂಕಿನಲ್ಲಿಯೇ ಉಪ್ಪಣಸಿ, ಚಿಕ್ಕಾಂಸಿಹೊಸೂರು, ಕೂಸನೂರು, ಕೂಡಲ ಬಹುಗ್ರಾಮ ಯೋಜನೆಗಳಿದ್ದು, 36 ಗ್ರಾಮಕ್ಕೆ ಕುಡಿಯುವ ನೀರೊದಗಿಸುವ ಯೋಜನೆ ಇದಾಗಿದೆ.ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಗತ್ಯವಿರುವಲ್ಲಿ ಪೈಪ್‌ಲೈನ್ ದುರಸ್ತಿ ಸೇರಿದಂತೆ ಸದ್ಯಕ್ಕೆ ಎಲ್ಲವೂ ಸರಿಯಾಗಿದೆ. ಉಳಿದದ್ದನ್ನು ಕಾದು ನೋಡಬೇಕಷ್ಟೆ.
ಮೈಮರೆಯುವುದಿಲ್ಲ: ಈ ಬಾರಿ ಕುಡಿಯುವ ನೀರಿನ ಕೊರತೆ ಆಗದು ಎಂಬ ವಿಶ್ವಾಸವಿದೆ. ಆದರೆ ನಾವು ಮೈಮರೆಯುವುದಿಲ್ಲ. ಎಲ್ಲ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳೊಂದಿಗೆ ನಿರಂತರ ಮಾಹಿತಿ ಪಡೆದು ಅಗತ್ಯ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ. ಅಗತ್ಯ ಬಿದ್ದರೆ ಖಾಸಗಿ ಕೊಳವೆ ಬಾವಿ, ಟ್ಯಾಂಕರ್ ಮೂಲಕವೂ ಕುಡಿಯುವ ನೀರು ಒದಗಿಸಲು ಬದ್ಧ ಎಂದು ಹಾನಗಲ್ಲ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಎಇಇ ಚಂದ್ರಶೇಖರ ನೆಗಳೂರ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.