ಟಿಬಿ ಡ್ಯಾಂನ ಕುಡಿವ ನೀರು ಬೆಳೆ ಬೆಳೆಯಲು ಬಳಕೆ!

KannadaprabhaNewsNetwork |  
Published : Nov 23, 2026, 02:00 AM IST
ಟಿಬಿ ಡ್ಯಾಂ | Kannada Prabha

ಸಾರಾಂಶ

ಎಲ್‌ ನಿನೊ ಪರಿಣಾಮದ ಆತಂಕದ ನಡುವೆಯೇ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆ ಉಳಿಸಿಕೊಳ್ಳಲು ನೀರಾವರಿ ಸಲಹಾ ಸಮಿತಿ ನಿರ್ಧಾರ ಕೈಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಎಲ್‌ ನಿನೊ ಪರಿಣಾಮದ ಆತಂಕದ ನಡುವೆಯೇ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆ ಉಳಿಸಿಕೊಳ್ಳಲು ನೀರಾವರಿ ಸಲಹಾ ಸಮಿತಿ ನಿರ್ಧಾರ ಕೈಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿರುವ ಭತ್ತದ ಬೆಳೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸಿದ್ದ ನೀರಿನಲ್ಲಿಯೇ ಒಂದಿಷ್ಟು ಪ್ರಮಾಣವನ್ನು ನೀರಾವರಿಗೆ ಬಳಸಲು ಮುಂದಾಗಿದೆ. ಆದರೂ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 8 ರಿಂದ 10 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿರುವ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಲು ಈ ನೀರು ಸಾಕಾಗುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಹೌದು, ತುಂಗಭದ್ರಾ ಜಲಾಶಯದಲ್ಲಿ ಕರ್ನಾಟಕದ ಪಾಲಿನ ನೀರಿನ ಬಳಕೆ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಆದರೆ, ಈಗಾಗಲೇ ನಾಟಿ ಮಾಡಿರುವ ಭತ್ತದ ಬೆಳೆ ಕಟಾವಿಗೆ ಬರುವ ವರೆಗೂ ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಕುಡಿಯುವ ನೀರಿಗಾಗಿ ಮೀಸಲಿಟ್ಟಿದ್ದ ನೀರಿನಲ್ಲಿಯೇ ಅಲ್ಪ ಪ್ರಮಾಣವನ್ನು ಬಳಕೆ ಮಾಡಿಕೊಳ್ಳಲು ನ.18ರಂದು ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

10.716 ಟಿಎಂಸಿ ಮೀಸಲು:

ಅಕ್ಟೋಬರ್‌ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಡೆಡ್ ಸ್ಟೋರೇಜ್ ಸೇರಿದಂತೆ 10.716 ಟಿಎಂಸಿ ನೀರನ್ನು ಕಾಯ್ದಿರಿಸಲಾಗಿತ್ತು. ಆದರೆ, ನ.18ರಂದು ನಡೆದ ಸಭೆಯಲ್ಲಿ ಈ ಪ್ರಮಾಣವನ್ನು 5.5 ಟಿಎಂಸಿಗೆ ಇಳಿಸಲಾಗಿದೆ. ಉಳಿದ ನೀರನ್ನು ನ.28ರವರೆಗೆ ಕಾಲುವೆಗಳಿಗೆ ಹರಿಸಿ ಅಚ್ಚುಕಟ್ಟು ಪ್ರದೇಶದ ಬೆಳೆಗಳನ್ನು ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.

ಸಂಪ್ರದಾಯಕ್ಕೆ ಮೊದಲ ಬಾರಿ ಬ್ರೇಕ್:

ತುಂಗಭದ್ರಾ ಜಲಾಶಯದಲ್ಲಿ ಈ ಹಿಂದೆ ಕುಡಿಯುವ ನೀರಿಗಾಗಿ ಸುಮಾರು 8 ಟಿಎಂಸಿ ಹಾಗೂ ಜಲಚರಗಳಿಗಾಗಿ 2 ಟಿಎಂಸಿ ಸೇರಿ ಒಟ್ಟು 10 ಟಿಎಂಸಿ ನೀರನ್ನು ಡೆಡ್ ಸ್ಟೋರೇಜ್ ಎಂದು ಕಾಯ್ದಿರಿಸುವ ಸಂಪ್ರದಾಯವಿತ್ತು. ಆದರೆ, ಈ ಬಾರಿ ರೈತರ ಬೆಳೆ ಉಳಿಸುವ ಅನಿವಾರ್ಯತೆ ಎದುರಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮೀಸಲನ್ನು 5.5 ಟಿಎಂಸಿಗೆ ಸೀಮಿತಗೊಳಿಸಿ, ಉಳಿಕೆ ನೀರನ್ನು ನೀರಾವರಿಗೆ ಬಳಸಲು ನಿರ್ಧರಿಸಿರುವುದು ಜಲಾಶಯದ ಇತಿಹಾಸದಲ್ಲೇ ಮೊದಲ ಪ್ರಯತ್ನವಾಗಿದೆ.

ಹತ್ತು ವರ್ಷಗಳ ಲೆಕ್ಕಾಚಾರ:

ಕಳೆದ ಹತ್ತು ವರ್ಷಗಳಲ್ಲಿ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿಗಾಗಿ ಬಳಕೆಯಾಗಿರುವ ನೀರಿನ ಪ್ರಮಾಣದ ಲೆಕ್ಕಾಚಾರವನ್ನು ಆಧಾರವಾಗಿಟ್ಟುಕೊಂಡು ಈ ಬಾರಿ ಮೀಸಲು ಪ್ರಮಾಣ ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ, ಎಲ್‌ನಿನೊ ಪರಿಣಾಮದಿಂದ ಮುಂದಿನ ಮುಂಗಾರು ಮಳೆಯ ಪ್ರಮಾಣದ ಬಗ್ಗೆ ಅನಿಶ್ಚಿತತೆ ಎದುರಾಗಿದ್ದು, ಈಗಾಗಲೇ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೇ ಎಂಬ ಆತಂಕವೂ ಇದೆ.

ಒಂದೆಡೆ ಲಕ್ಷಾಂತರ ಎಕರೆ ಭತ್ತದ ಬೆಳೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ, ಮತ್ತೊಂದೆಡೆ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಬೇಕಾದ ಜವಾಬ್ದಾರಿ. ಈ ಎರಡರ ನಡುವೆ ತುಂಗಭದ್ರಾ ಜಲಾಶಯದ ನೀರು ಹಂಚಿಕೆ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.ಕೋಟ್‌...

ಕುಡಿಯುವ ನೀರಿಗೆ ಅಗತ್ಯವಿರುವ ನೀರಿನ ಪ್ರಮಾಣದ ಲೆಕ್ಕಾಚಾರ ಮಾಡಿಯೇ ರೈತರ ಹಿತದೃಷ್ಟಿಯಿಂದ ಒಂದಿಷ್ಟು ನೀರನ್ನು ನೀರಾವರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಕಾಯ್ದಿರಿಸುತ್ತಿದ್ದ ನೀರಿನ ಬಳಕೆಯ ಪ್ರಮಾಣವನ್ನು ಪರಿಶೀಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಶಿವರಾಜ ತಂಗಡಗಿ, ಸಚಿವ, ಅಧ್ಯಕ್ಷರು, ನೀರಾವರಿ ಸಲಹಾ ಸಮಿತಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕೋಟ್‌

ಕುಡಿವ ನೀರಿಗಾಗಿ ಕಾಯ್ದಿರಿಸಿದ ನೀರಿನಲ್ಲಿಯೇ ಒಂದಿಷ್ಟು ಪ್ರಮಾಣವನ್ನು ಬಳಕೆ ಮಾಡಿಕೊಂಡು ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ.

- ಹೆಸರು ಹೇಳಲು ಇಚ್ಛಿಸದ ಅಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ