ಮಂಡ್ಯ ಮಂಜುನಾಥ
ಮದ್ದೂರು ತಾಲೂಕಿನ ಗೆಜ್ಜಲಗೆರೆ, ಸೋಮನಹಳ್ಳಿ, ಗೊರವನಹಳ್ಳಿ, ಚಾಮನಹಳ್ಳಿ ಗ್ರಾಮ ಪಂಚಾಯ್ತಿಗಳು ನಗರಸಭೆಗೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ಗ್ರಾಮ ಪಂಚಾಯ್ತಿಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ.
೨೦೨೫-೨೬ನೇ ಸಾಲಿನಲ್ಲಿ ಗ್ರಾಮ ಪಂಚಾಯ್ತಿಗಳಿಗೆ ರಾಜ್ಯ ಹಣಕಾಸು ಆಯೋಗದ ಅನುದಾನದಡಿ ಹಂಚಿಕೆಯಾದ ೧೫.೮೬ ಕೋಟಿ ರು. ಅನುದಾನ ಬಿಡುಗಡೆಗೊಳಿಸಿದೆ. ಈ ಹಣವನ್ನು ರಾಜ್ಯದ ಒಟ್ಟು ೫೯೪೬ ಗ್ರಾಮ ಪಂಚಾಯ್ತಿಗಳ ಪೈಕಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ, ಸೋಮನಹಳ್ಳಿ, ಗೆಜ್ಜಲಗೆರೆ, ಗೊರವನಹಳ್ಳಿ ಹಾಗೂ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯ್ತಿ ಸೇರಿದಂತೆ ಒಟ್ಟು ಐದು ಗ್ರಾಪಂಗಳು ಪುರಸಭೆ, ನಗರ ಪ್ರದೇಶಕ್ಕೆ ಪರಿವರ್ತನೆಯಾಗಿ ಹಸ್ತಾಂತರಗೊಂಡಿವೆ. ಆದ್ದರಿಂದ ಇವುಗಳನ್ನು ಹೊರತುಪಡಿಸಿ ಉಳಿದ ಒಟ್ಟು ೫೯೪೧ ಗ್ರಾಪಂಗಳಿಗೆ ಶೇ.೯೦ರಷ್ಟು ಜನಸಂಖ್ಯೆ ಆಧಾರದ ಮೇಲೆ ಶೇ.೧೦ರಷ್ಟು ಭೌಗೋಳಿಕ ಪ್ರದೇಶದ ಆಧಾರದ ಮೇಲೆ ಹಂಚಿಕೆ ಮಾಡಿ ಕುಡಿಯುವ ನೀರು ನಿರ್ವಹಣೆ ಚಟುವಟಿಕೆಗಳಿಗೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ನಿರ್ದೇಶಕರು ತಿಳಿಸಿದ್ದಾರೆ.ಗ್ರಾಮ ಪಂಚಾಯ್ತಿಗಳಿಗೆ ಶೇ.೯೦ರಷ್ಟು ಜನಸಂಖ್ಯೆ ಆಧಾರದ ಮೇಲೆ ಹಾಗೂ ಶೇ.೧೦ರಷ್ಟು ಭೌಗೋಳಿಕ ಪ್ರದೇಶದ ಆಧಾರದ ಮೇಲೆ ಹಂಚಿಕೆ ಮಾಡಿ ಕುಡಿಯುವ ನೀರು ನಿರ್ವಹಣೆ ಚಟುವಟಿಕೆಗಳಿಗೆ ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಉಳಿದ ೬೦೮.೦೪ ಕೋಟಿ ರು. ಅನುದಾನವನ್ನು ವಾರ್ಷಿಕ ೫೦ ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಗ್ರಾಪಂಗಳಿಗೆ ಶಾಸನಬದ್ಧ ಅನುದಾನ ಹೊರತುಪಡಿಸಿ ವಿಶೇಷ ಅನುದಾನವೆಂದು ಪರಿಗಣಿಸಿ ಗ್ರಾಪಂ ಸಿಬ್ಬಂದಿ ವೇತನಕ್ಕೆ ಭರಿಸುವಂತೆ ಸೂಚಿಸಲಾಗಿದೆ. ಶಾಸನಬದ್ಧ ಅನುದಾನದ ಶೇ.೪೦ರಷ್ಟನ್ನು ಗ್ರಾಪಂ ವಿದ್ಯುತ್ ಬಿಲ್‌ಗಳ ಪಾವತಿಗೆ ಮೀಸಲಿರಿಸಿದ್ದು, ಹಣವನ್ನು ಖಾತೆಗೆ ಬಿಡುಗಡೆ ಮಾಡುವಾಗ ಶೇ.೯೦ರಷ್ಟು ಜನಸಂಖ್ಯೆ ಆಧರಿಸಿ ಶೇ.೧೦ರಷ್ಟನ್ನು ಭೌಗೋಳಿಕ ಪ್ರದೇಶದ ಆಧಾರದ ಮೇಲೆ ಬಿಡುಗಡೆಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.ಸರ್ಕಾರ ದೃಢ ನಿರ್ಧಾರ
ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ರೈತ ಮುಖಂಡರು ಹಾಗೂ ಗ್ರಾಮಸ್ಥರು ನಡೆಸುತ್ತಿದ್ದ ಹೋರಾಟಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ನಾಯಕರು ಆರಂಭದಲ್ಲಿ ಕೈಜೋಡಿಸಿದರು. ನಗರಸಭೆಯಿಂದ ಗ್ರಾಮ ಪಂಚಾಯ್ತಿಗಳನ್ನು ಹೊರಗಿಡುವಂತೆ ಹೂಂಕರಿಸಿದರು. ತೀವ್ರ ಸ್ವರೂಪದ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು. ಬಿಜೆಪಿಯವರ ಜೊತೆಗೂಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಕೂಡ ನಗರಸಭೆಯಿಂದ ಗ್ರಾಮ ಪಂಚಾಯ್ತಿಗಳನ್ನು ಹೊರಗಿಡದಿದ್ದರೆ ಮದ್ದೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡುವುದಾಗಿ ಘೋಷಿಸಿದರು. ಅದೆಲ್ಲವೂ ಘೋಷಣೆಗೆ ಸೀಮಿತವಾಗಿ ಉಳಿಯಿತೇ ವಿನಃ ಅಲ್ಲಿಂದ ಮುಂದೆ ಹೆಜ್ಜೆಯನ್ನೂ ಇಡಲಿಲ್ಲ. ಹೀಗೆ ರಾಜಕೀಯ ಬೆಂಬಲವಿಲ್ಲದೆ, ಜನ ಚಳವಳಿಯಾಗಿಯೂ ರೂಪುಗೊಳ್ಳದೆ ಕೇವಲ ನಾಲ್ಕು ಪಂಚಾಯ್ತಿಗಳಿಗೆ ಸೀಮಿತವಾಗಿ ಹೋರಾಟ ಮುಂದುವರೆದಿದೆ.