ಕುಡಿಯುವ ನೀರಿನ‌ ಸಮಸ್ಯೆ, ವಿದ್ಯಾರ್ಥಿಗಳ ವಿನೂತನ ಪ್ರತಿಭಟನೆ

KannadaprabhaNewsNetwork |  
Published : Apr 12, 2026, 02:30 AM IST
ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲದ ಎದುರಿಗೆ ಕುಡಿಯುವ ನೀರಿನ‌ ಸಮಸ್ಯೆ ನಿವಾರಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ತಲೆದೋರಿರುವ ಕುಡಿಯುವ ನೀರಿನ‌ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

ಶಿಗ್ಗಾಂವಿ: ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ತಲೆದೋರಿರುವ ಕುಡಿಯುವ ನೀರಿನ‌ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ವಿಶ್ವವಿದ್ಯಾಲಯ ಆಡಳಿತ ಕುಸಿದಿದೆ ಎಂಬುದು ಸ್ಪಷ್ಟವಾಗುತ್ತಿದೆ. ಮೊನ್ನೆಯಷ್ಟೇ ಏಪ್ರೀಲ್ 11ರ ಒಳಗಾಗಿ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ದುರವಸ್ಥೆಯನ್ನು ಸರಿಪಡಿಸುವ ಭರವಸೆಯನ್ನು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ವಿದ್ಯಾರ್ಥಿಗಳಿಗೆ ನೀಡಿದ್ದರು. ಆದರೆ, ನುಡಿದಂತೆ ನಡೆಯದೇ ಅದೇ ಹಳೆಯ ಉದಾಸೀನ ಧೋರಣೆ ಮುಂದುವರಿಸಿದ್ದರು. ಕುಲಪತಿಗಳ ನಡೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಇಂದು ವಿವಿ ಆಡಳಿತ ಭವನದ ಎದುರು ವಿನೂತನ‌ ಪ್ರತಿಭಟನೆ ನಡೆಸಿದ್ದಾರೆ. ನಿಮ್ಮ ಕಾಲು ಬೀಳುತ್ತೇವೆ ಕುಡಿಯುವ ನೀರು ಕೊಡಿ. ನಿಮಗೆ ಕೈಮುಗಿಯುವೆವು, ನಿಮ್ಮ ಕಾಲು ಬೀಳುತ್ತೇವೆ ಎಂದು ಭಿತ್ತಿ ಫಲಕಗಳನ್ನು ಹಿಡಿದು ಅಲವತ್ತುಕೊಂಡಿದ್ದಾರೆ. ಏಪ್ರೀಲ್ 11ರ ಒಳಗಾಗಿ ಸಮಸ್ಯೆ ಬಗೆ ಹರಿಸ್ತಿನಿ. ನೀರು ಕೊಡ್ತಿನಿ ಎಂದಿದ್ದ ಕುಲಪತಿ ಪ್ರೊ ಟಿ.ಎಂ. ಭಾಸ್ಕರ್ ಮಾತು ತಪ್ಪಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳದ ಅವರು ವಿದ್ಯಾರ್ಥಿಗಳ ಪ್ರತಿಭಟನೆಯಿಂದ ವಿಚಲಿತರಾಗಿದ್ದು, ಹೀಗೆ ಪ್ರತಿಭಟನೆ ಮಾಡಿದ್ರೆ ನಿಮ್ಮ ಭವಿಷ್ಯ ಹಾಳಾಗುತ್ತದೆ. ನಿಮ್ಮ ಹಾಜರಾತಿ ನೋಡ್ತೇನೆ, ಎಲ್ರೂ ತಪ್ಪದೆ ಕ್ಲಾಸಿಗೆ ಬನ್ನಿ ಎಂಬ ಬೆದರಿಕೆಯ ದಾಟಿಯ ಬಿಟ್ಟಿ ಉಪದೇಶ ನೀಡಿದ್ದಾರೆ.

ಇದಕ್ಕೆ ಜಗ್ಗದ ವಿದ್ಯಾರ್ಥಿಗಳು ನಿಮ್ಮ ಬಿಟ್ಟಿ ಉಪದೇಶ ಬೇಡ, ಕುಡಿಯಲು ನೀರು ಕೊಡಿ. ಶೌಚಾಲಯ ಸ್ವಚ್ಛ ಮಾಡಿಕೊಡಿ ಎಂದು ಪಟ್ಟು ಹಿಡಿದರು. ವಿದ್ಯಾರ್ಥಿಗಳ ಬಿಗಿಪಟ್ಟಿಗೆ ಮಣಿದ ಕುಲಪತಿಗಳು ಇನ್ನೆರಡು ದಿನ ಕಾಲಾವಕಾಶ ಕೋರಿದ್ದು ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ಮುಂದುವರಿಸಿ ಎಂದು ಭರವಸೆ ನೀಡಿದರು. ಇದರಿಂದ ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು ಆವರಣದಲ್ಲಿರುವ ಗಿಡ ಮರಗಳಿಗೆ ಭಿತ್ತಿಫಲಕ ನೇತು ಹಾಕಿ ತಮ್ಮ ಪ್ರತಿಭಟನೆ ಮುಕ್ತಾಯಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ದೇವರಾಜ ಹಂಚಿನಮನಿ, ಮುರಳಿಕೃಷ್ಣ ಪವಾರ, ಪ್ರವೀಣ ಅರಳಿಕಟ್ಟಿ, ದೀಪಾ ಕೊಪ್ಪದ, ಪೂಜಾ, ಹೇಮಂತ ದಾವಣಗೆರೆ, ಕಿರಣ ಎಸ್.ಜಿ., ಪ್ರಶಾಂತ ಗುಡಿಮನಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ