ತುಂಗಭದ್ರೆ ತಟದ ಗ್ರಾಮಗಳಲ್ಲೂ ಕುಡಿಯುವ ನೀರಿನ ಅಭಾವ

KannadaprabhaNewsNetwork |  
Published : Mar 16, 2026, 01:15 AM IST
ತಳಕಲ್‌ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಾದು ಕುಳಿತ ಜನ | Kannada Prabha

ಸಾರಾಂಶ

ಜನ- ಜಾನುವಾರುಗಳಿಗೆ ನೀರಿನ ದಾಹವೂ ಹೆಚ್ಚಾಗುತ್ತಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನ ಬಹುಭಾಗ ಪ್ರದೇಶ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿ ಹರಿಯುತ್ತಿದೆ. ನದಿ ತಟದಲ್ಲೇ ಇರುವ ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಮಾತ್ರ ತಪ್ಪುತ್ತಿಲ್ಲ!

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗಿದ್ದು, 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ 9 ಅಬಾಧಿತ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಜತೆಗೆ ಜನ- ಜಾನುವಾರುಗಳಿಗೆ ನೀರಿನ ದಾಹವೂ ಹೆಚ್ಚಾಗುತ್ತಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ಸದ್ಯ 1.9 ಟಿಎಂಸಿ ನೀರು ಸಂಗ್ರಹವಾಗಿದ್ದು, 9 ಕುಡಿಯುವ ನೀರಿನ ಯೋಜನೆಗಳಿಗೆ ಈ ಯೋಜನೆ ಆಸರೆಯಾಗಿದೆ. ಉಳಿದಂತೆ ತಾಲೂಕಿನ ಹೊಳಗುಂದಿ ಸೇರಿದಂತೆ ಇತರ 15 ಹಳ್ಳಿಗಳು ಹಾಗೂ ಅಂಕ್ಲಿ-ಕೊಂಬಳಿ ಸೇರಿದಂತೆ 21 ಹಳ್ಳಿಗಳ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ, ಜಾಕ್‌ವೆಲ್‌ಗಳಿಗೆ ನೀರಿಲ್ಲದೇ ಬಂದ್ ಆಗುವ ಲಕ್ಷಣಗಳಿವೆ. ಈ ಭಾಗದ ಜನರಿಗೆ ಕೊಳವೆಬಾವಿಗಳ ನೀರೇ ಗತಿಯಾಗಿದೆ.

ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಹಳ್ಳಿಗಳ ಪಟ್ಟಿ ತಯಾರಿಸಿದ್ದು, 34 ಹಳ್ಳಿಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ತಾಲೂಕಿನ 26 ಗ್ರಾಪಂ ವ್ಯಾಪ್ತಿಯ 14 ಗ್ರಾಪಂಗಳ, 34 ಹಳ್ಳಿಗಳಲ್ಲಿ ಈಗ ಕೊಳವೆಬಾವಿ ನೀರು ಒದಗಿಸಲಾಗುತ್ತಿದೆ.

ಸಮಸ್ಯಾತ್ಮಕ ಹಳ್ಳಿಗಳು:

ದಾಸರಹಳ್ಳಿ ತಾಂಡಾ, ಬಸರಹಳ್ಳಿ ತಾಂಡಾ, ಹಿರೇಮಲ್ಲನಕೆರೆ, ವರಕನಹಳ್ಳಿ, ಗೋವಿಂದಪುರ ತಾಂಡಾ-1, ಗೋವಿಂದಪುರ ತಾಂಡಾ-2, ಹಕ್ಕಂಡಿ, ದುಂಗಾವತಿ ತಾಂಡಾ, ಅಂಕ್ಲಿ, ಅಂಕ್ಲಿ, ಬಿತ್ಯಾನತಾಂಡಾ, ಬಾನ್ಯನ್‌ ತಾಂಡಾ, ಕಾಲ್ವಿ ತಾಂಡಾ, ಮಹಾಜನದಹಳ್ಳಿ, ತಳಕಲ್ಲು, ಕೆಂಚಮ್ಮನಹಳ್ಳಿ, ಎಂ. ಕಲ್ಲಹಳ್ಳಿ, ನಂದಿಹಳ್ಳಿ, ಕೊಯಿಲಾರಗಟ್ಟಿ, ಕೊಯಿಲಾರಗಟ್ಟಿ ತಾಂಡಾ, ಹೊಸ ಅಲ್ಲಿಪುರ, ಕಾಗನೂರು, ವಡ್ಡನಹಳ್ಳಿ ತಾಂಡಾ, ಹಗರನೂರು, ಕಗ್ಗಲಗಟ್ಟಿ ತಾಂಡಾ, ವ್ಯಾಸಮಲ್ಲಾಪುರ ತಾಂಡಾ, ಮಾನ್ಯರ ಮಸಲವಾಡ, ಸೋವೇನಹಳ್ಳಿ, ಇಟ್ಟಗಿ, ಅಂಗೂರು, ಅರಳಿಹಳ್ಳಿ ತಾಂಡಾ, ನಾಗತಿಬಸಾಪುರ, ಹೊಳಗುಂದಿ, ಬಾವಿಹಳ್ಳಿಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳೆಂದು ಗುರುತಿಸಲಾಗಿದೆ.

ಬೇಸಿಗೆ ಧಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕುಡಿಯುವ ನೀರಿನ ಕುರಿತು ಸುತ್ತೋಲೆ ಹೊರಡಿಸಿ, ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ಕ್ರಮಗಳ ಕೈಗೊಳ್ಳುವ ಕುರಿತು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಾಪಂನಲ್ಲಿ ಪಿಡಿಒಗಳು, ಗ್ರಾಮೀಣ ಕುಡಿಯುವ ನೀರು- ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ ನಡೆದಿದೆ. ಮುಂದಿನ ವಾರದಲ್ಲಿ ತಹಸೀಲ್ದಾರ್‌, ಶಾಸಕರು ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ಮಾಡಲಿದ್ದಾರೆ.

ಸಮಸ್ಯಾತ್ಮಕ ಹಳ್ಳಿಗಳಲ್ಲಿ ಈಗಾಗಲೇ ಸರ್ಕಾರಿ ಕೊಳವೆಬಾವಿಗಳನ್ನು ಹೊರತುಪಡಿಸಿ, ಖಾಸಗಿ ಕೊಳವ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲು 40ರಿಂದ 45 ಕೊಳವೆಬಾವಿ ಗುರುತಿಸಲಾಗಿದೆ.

ತಾಲೂಕಿನಲ್ಲಿ 493 ಸರ್ಕಾರಿ ಕೊಳವೆಬಾವಿಗಳಿವೆ. ಇದರಲ್ಲಿ 382 ಕೊಳವೆಬಾವಿಗಳಿಂದ ನೀರು ಪೂರೈಕೆಯಾಗುತ್ತಿವೆ. ಉಳಿದ 111 ಕೊಳವೆಬಾವಿಗಳ ನೀರು ಯೋಗ್ಯವಾಗಿಲ್ಲ ಎಂಬ ಕಾರಣಕ್ಕಾಗಿ ನೀರು ಪೂರೈಕೆ ಬಂದ್‌ ಮಾಡಲಾಗಿದೆ.

ತಾಲೂಕಿನಲ್ಲಿ 119 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇದರಲ್ಲಿ ಕೆಲವು ಘಟಕಗಳಿಗೆ ನೀರಿನ ಸಂಪರ್ಕ ಇಲ್ಲದೇ ಬಂದ್‌ ಆಗಿವೆ. ಇನ್ನು ಕೆಲವು ದುರಸ್ತಿಯಾಗದೇ ಉಳಿದಿವೆ. ಮುದೇನೂರು ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರಿನ ಸಂಪರ್ಕ ಇಲ್ಲದೇ ಬಂದ್‌ ಆಗಿದೆ. ಗ್ರಾಮಸ್ಥರು ವಿಧಿ ಇಲ್ಲದೇ ಕೊಳವೆಬಾವಿ ನೀರು ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ 9 ಯೋಜನೆಗಳಿಗೆ ನೀರು ಲಭ್ಯವಿದೆ. ಆದರೆ ಅಂಕ್ಲಿ-ಕೊಂಬಳಿ, ಹೊಳಗುಂದಿ ಯೋಜನೆಗಳಿಗೆ ನೀರಿನ ಲಭ್ಯತೆ ಇಲ್ಲದೇ ಬಂದ್‌ ಆಗುವ ಸಾಧ್ಯತೆ ಇದೆ. ಈ ಭಾಗದ ಜನರಿಗೆ ಕೊಳವೆಬಾವಿಗಳ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ತಾಪಂ ಇಒ ಜಿ. ಪರಮೇಶ್ವರ.

ತಾಲೂಕಿನ ಇಟ್ಟಗಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿ ಬೇಸಿಗೆ ವೇಳೆ ಕುಡಿಯುವ ನೀರಿನ ಬವಣೆ ಎದುರಿಸುತ್ತಿದ್ದೇವೆ. ತಳಕಲ್ಲು ಕೆರೆಗೆ ನೀರು ತುಂಬಿಸಿದರೆ ನೀರಿನ ತಾಪತ್ರಯ ತಪ್ಪಲಿದೆ. ಆದರೆ ಕೆರೆಗೆ ನೀರು ತುಂಬುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥ ಚಂದ್ರಪ್ಪ ತಳಕಲ್ಲು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಪದೋಷ ನಿಯಂತ್ರಣಕ್ಕೆ ಮಾಹಿತಿ ಹಕ್ಕು ಕಾಯ್ದೆ ಸಹಕಾರಿ: ಪವನ ಗುನಗಾ
ಕೊಪ್ಪಳ: ಸಚಿವ ಸ್ಥಾನಕ್ಕಾಗಿ ಪೈಪೋಟಿ ಶುರು?