ಹರಪನಹಳ್ಳಿ: 2025-26ನೇ ಸಾಲಿನಲ್ಲಿ ತಾಲೂಕಿನ ಎಲ್ಲ ಗ್ರಾಪಂ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ತಲುಪುವ ಮೂಲಕ ಹರಪನಹಳ್ಳಿ ತಾಲೂಕು ಎರಡನೇ ಬಾರಿಗೆ ವಿಜಯನಗರ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದೆ ಎಂದು ತಾಪಂ ಇಒ ವೈ.ಎಚ್. ಚಂದ್ರಶೇಖರ್ ತಿಳಿಸಿದ್ದಾರೆ.
2024-25ನೇ ಸಾಲಿನಲ್ಲಿಯೂ ಹರಪನಹಳ್ಳಿ ತಾಲೂಕು ಶೇ.90.04 ಸಾಧನೆ ಮಾಡುವ ಮೂಲಕ ಮೊದಲ ಸ್ಥಾನ ಪಡೆದಿತ್ತು. ನಮ್ಮ ಈ ಸಾಧನೆಗೆ ಅಂದು ಸ್ಥಳೀಯ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತೆರಿಗೆ ವಸೂಲಾತಿಗೆ ಶ್ರಮಿಸಿದ ಗ್ರಾಪಂ ಹಾಗೂ ತಾಪಂ ಸಿಬ್ಬಂದಿ ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.
ತೆರಿಗೆ ವಸೂಲಾತಿಗಾಗಿ ತಾಲೂಕಿನಲ್ಲಿ ವಿಶೇಷ ಕಾರ್ಯಪಡೆ ಜೊತೆಗೆ ಜಿಪಂನಿಂದ ಒಬ್ಬರನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ತೆರಿಗೆ ಎನ್ನುವುದು ಕೇವಲ ಹಣವಲ್ಲ, ಅದು ಗ್ರಾಮದ ಅಭಿವೃದ್ಧಿಗೆ ಹಾಕುವ ಬಂಡವಾಳ ಎಂಬ ಘೋಷವಾಕ್ಯವನ್ನು ನಮ್ಮ ಸಿಬ್ಬಂದಿ ಜನರಿಗೆ ಮನವರಿಕೆ ಮಾಡಿ ತೆರಿಗೆ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.ಸಂಗ್ರಹವಾದ ತೆರಿಗೆ ಹಣವನ್ನು ಗ್ರಾಮದ ರಸ್ತೆ, ಚರಂಡಿ ಮತ್ತು ಬೀದಿದೀಪಗಳ ದುರಸ್ತಿಗೆ ಹೇಗೆ ಬಳಸಲಾಗುತ್ತಿದೆ ಎಂದು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದ ಜನರಲ್ಲಿ ಪಂಚಾಯಿತಿ ಮೇಲೆ ನಂಬಿಕೆ ಹೆಚ್ಚಲು ಕಾರಣವಾಗಿದೆ ಹಾಗೂ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವ ಮೂಲಕ ಜನರು ಕಚೇರಿಗೆ ಅಲೆಯುವ ಸಂಕಷ್ಟ ತಪ್ಪಿಸಿದ್ದು ವಸೂಲಾತಿ ವೇಗ ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲೆಗಳ ಕಾರ್ಯಕ್ಷಮತೆ ಅಳೆಯಲು ರೂಪಿಸಿರುವ 36 ಮಾನದಂಡಗಳ ರ‍್ಯಾಂಕಿಂಗ್ ವ್ಯವಸ್ಥೆಯಲ್ಲಿ ಹರಪನಹಳ್ಳಿ ಆಡಳಿತಾತ್ಮಕವಾಗಿ ಉತ್ತಮ ಸಾಧನೆ ಮಾಡಿದೆ. ಕಂದಾಯ ವಸೂಲಾತಿ, ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ್ ಮಿಷನ್, ಆಡಳಿತಾತ್ಮಕ ನಿರ್ವಹಣೆ ಸೇರಿ ವಿವಿಧ 36 ಮಾನದಂಡಗಳಲ್ಲಿಯೂ ಹರಪನಹಳ್ಳಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.