ಚರಂಡಿ ಕಲ್ಮಶ ಮಿಶ್ರಿತ ಕುಡಿಯುವ ನೀರು ಪೂರೈಕೆ!

KannadaprabhaNewsNetwork |  
Published : Jun 29, 2025, 01:32 AM IST
28ಎಚ್‌ಯುಬಿ22ಚರಂಡಿ ನೀರು ಮಿಶ್ರಣವಾಗಿರುವ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು. | Kannada Prabha

ಸಾರಾಂಶ

ದೇವರಗುಡಿಹಾಳ ರಸ್ತೆಯ ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ವಾರ್ಡಿನ ಯುಕೆಟಿ ಹಿಲ್ಸ್‌ನ ಲಕ್ಕಿ ಹಾಲ್ ಹಿಂದಿನ ಸುಮಾರು 20 ಮನೆಗಳಿಗೆ ಇಂತಹ ನೀರು ಪೂರೈಕೆಯಾಗುತ್ತಿದೆ. ವಾರ್ಡ್‌ ಸದಸ್ಯೆ ಮಂಗಳಾ ಗೌರಿ, ಪಾಲಿಕೆ ಅಧಿಕಾರಿಗಳು, ಎಲ್‌ಆ್ಯಂಡ್‌ಟಿ ಸಿಬ್ಬಂದಿಗೂ ತೋರಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಬರೀ ಅಧಿಕಾರಿ ವರ್ಗ ಪರಿಶೀಲಿಸಿ ಹೋಗಿದೆಯೇ ಹೊರತು ಸಮಸ್ಯೆ ಬಗೆಹರಿಸಿಲ್ಲ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಒಂದು ವರ್ಷದಿಂದ ಪಾಲಿಕೆ ವ್ಯಾಪ್ತಿಯ ಯುಕೆಟಿ ಹಿಲ್ಸ್‌ನ ಲಕ್ಕಿ ಹಾಲ್‌ ಹಿಂದುಗಡೆ ಪ್ರದೇಶದಲ್ಲಿ ಚರಂಡಿ ತ್ಯಾಜ್ಯ ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ದೇವರಗುಡಿಹಾಳ ರಸ್ತೆಯ ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ವಾರ್ಡಿನ ಯುಕೆಟಿ ಹಿಲ್ಸ್‌ನ ಲಕ್ಕಿ ಹಾಲ್ ಹಿಂದಿನ ಸುಮಾರು 20 ಮನೆಗಳಿಗೆ ಇಂತಹ ನೀರು ಪೂರೈಕೆಯಾಗುತ್ತಿದೆ. ವಾರ್ಡ್‌ ಸದಸ್ಯೆ ಮಂಗಳಾ ಗೌರಿ, ಪಾಲಿಕೆ ಅಧಿಕಾರಿಗಳು, ಎಲ್‌ಆ್ಯಂಡ್‌ಟಿ ಸಿಬ್ಬಂದಿಗೂ ತೋರಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಬರೀ ಅಧಿಕಾರಿ ವರ್ಗ ಪರಿಶೀಲಿಸಿ ಹೋಗಿದೆಯೇ ಹೊರತು ಸಮಸ್ಯೆ ಬಗೆಹರಿಸಿಲ್ಲ.

ನೀರು ಹೊರಬಿಡಬೇಕು: ಇದೇ ನೀರು ಬಳಸಬೇಕು ಎಂದರೆ ಇಲ್ಲಿನ ಜನ ನೀರು ಸರಬರಾಜು ಆದಾಗ ಮೊದಲು ಒಂದು ತಾಸು ನೀರನ್ನು ಚರಂಡಿಗೆ ಬಿಡುತ್ತಾರೆ. ಈ ವೇಳೆ ಸಾಬೂನಿನ ನೊರೆಯಂತೆ ಬರುವ ನೀರು ಸಂಗ್ರಹಿಸಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಒಂದೆರಡು ದಿನ ತುಂಬಿಟ್ಟರೆ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಹೀಗಾಗಿ, ಶುದ್ಧ ನೀರು ಬರುವ ವರೆಗೆ ಚರಂಡಿಗೆ ಬಿಡುತ್ತಾರೆ. ಇದರಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ಸ್ಮಾರ್ಟ್‌ಸಿಟಿ ಪಟ್ಟ ಪಡೆದಿರುವ ನಮ್ಮ ಹುಬ್ಬಳ್ಳಿಯಲ್ಲಿ ಇಂತಹ ನೀರು ಪೂರೈಕೆಯಾಗುತ್ತಿರುವುದು ದುರದೃಷ್ಟಕರ ಎನ್ನುತ್ತಾರೆ ಇಲ್ಲಿನ ಜನರು.

ಪಾಲಿಕೆ ಸದಸ್ಯೆ ಹಾರಿಕೆ ಉತ್ತರ?: ಈ ಕುರಿತು ಪಾಲಿಕೆ ಸದಸ್ಯೆ ಮಂಗಳಾ ಗೌರಿ ಹಾರಿಕೆ ಉತ್ತರವನ್ನೇ ನೀಡುತ್ತಾರೆ. ವರ್ಷದ ಹಿಂದೆಯೇ ಜನತೆ ಸಮಸ್ಯೆ ನನ್ನ ಗಮನಕ್ಕೆ ತಂದಿದ್ದರು. ಆಗ, ಜಲಮಂಡಳಿ ಮತ್ತು ಎಲ್‌ ಆ್ಯಂಡ್‌ ಟಿ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದೆ. ಅಲ್ಲಿ ಅಕ್ರಮ ಸಕ್ರಮವಾಗಿರುವುದರಿಂದ ಸ್ಥಳೀಯರೇ ಪೈಪ್‌ಲೈನ್‌ ಮಾಡಿಕೊಂಡಿದ್ದಾರೆ. ಹೀಗಾಗಿ ಎಲ್ಲಿ ಸಮಸ್ಯೆ ಆಗಿದೆ ಎನ್ನುವುದು ತಿಳಿಯದಾಗಿದೆ. ಜಲಮಂಡಳಿಯಲ್ಲಿ ಹಳೆಯ ಸಿಬ್ಬಂದಿ ತೆಗೆದು ಹಾಕಿ ಹೊಸ ಸಿಬ್ಬಂದಿ ನೇಮಿಸಿಕೊಂಡಿರುವುದರಿಂದ ಇಂತಹ ಸಮಸ್ಯೆಗಳಾಗುತ್ತಿವೆ. ತಕ್ಷಣವೇ ಸ್ಥಳಕ್ಕೆ ಜಲಮಂಡಳಿ ಮತ್ತು ಎಲ್‌ ಆ್ಯಂಡ್‌ ಟಿ ಸಿಬ್ಬಂದಿ ಜತೆ ತೆರಳಿ ಕಲುಷಿತ ನೀರು ಎಲ್ಲಿ ಸೇರುತ್ತಿದೆ ಎನ್ನುವುದನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಒಂದು ವರ್ಷದಿಂದ ಕುಡಿಯುವ ನೀರಿಗೆ ಚರಂಡಿ ನೀರು ಸೇರಿ ನಮ್ಮ ಮನೆಗಳಿಗೆ ಪೂರೈಕೆಯಾಗುತ್ತಿದೆ. ಪಾಲಿಕೆ ಸದಸ್ಯರು, ಎಲ್‌ ಆ್ಯಂಡ್‌ ಟಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಬಂದು ಪರಿಶೀಲಿಸಿ ಹೋದರೆ ವಿನಃ ಎಲ್ಲಿ ಚರಂಡಿ ನೀರು ಸೇರುತ್ತಿದೆ ಎಂಬುದನ್ನು ಕಂಡು ಹಿಡಿಯಲು ಆಗಿಲ್ಲ. ಶೀಘ್ರ ಸಮಸ್ಯೆ ಪರಿಹರಿಸಿ ನಮಗೆ ಶುದ್ಧ ನೀರು ಪೂರೈಸಲಿ ಎಂದು ಯುಕೆಟಿ ಹಿಲ್ಸ್‌ ನಿವಾಸಿ ಬಶೀರ್ ಗಂಗೂರ ಹೇಳಿದರು.

ಈಗಾಗಲೇ ವಿಶಾಲನಗರದ ಸುತ್ತಮುತ್ತ ಹೊಸದಾಗಿ ಪೈಪ್‌ಲೈನ್‌ ಕಾಮಗಾರಿ ಮಾಡಲಾಗಿದೆ. ಕೆಲ ಚಿಕ್ಕಪುಟ್ಟ ಕಾಮಗಾರಿ ಬಾಕಿ ಉ‍ಳಿದಿದ್ದು, ಒಂದು ತಿಂಗಳ ಅವಧಿಯಲ್ಲಿ ಮುಗಿಸಿ ಹೊಸ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಕಲುಷಿತ ನೀರು ಸೇರ್ಪಡೆಯಾಗುತ್ತಿರುವ ಸ್ಥಳಕ್ಕೆ ತೆರಳಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು ಎಂದು ಪಾಲಿಕೆ ಸದಸ್ಯೆ ಮಂಗಳಾ ಗೌರಿ, ಪಾಲಿಕೆ ಸದಸ್ಯೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!