ಎಲ್.ವಿ.ನವೀನ್‌ಕುಮಾರ್
ರೈತರ ಜೀವನಾಡಿ, ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.೩೦ರ ಸೋಮವಾರ ಬಾಗಿನ ಅರ್ಪಿಸಲಿದ್ದಾರೆ.
ಅಂದು ಮಧ್ಯಾಹ್ನ ೧೨ ಗಂಟೆಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಆರ್.ಎಸ್.ಜಲಾಶಯದ ಬಳಿ ಇರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ೧೨.೩೦ ಗಂಟೆಗೆ ಬಾಗಿನ ಅರ್ಪಿಸುವರು.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ. ೨೦೧೩ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರು ಆಗಲೂ ಬಾಗಿನ ಅರ್ಪಿಸುವ ಭಾಗ್ಯ ಒದಗಿ ಬಂದಿರಲಿಲ್ಲ. ೨೦೧೪ರಲ್ಲಿ ಅಣೆಕಟ್ಟೆ ೧೨೩ ಅಡಿಗೆ ತಲುಪಿ ಜಲಾಶಯ ಆಗಲೂ ತುಂಬಿರಲಿಲ್ಲ. ಬಳಿಕ ಹೇಮಾವತಿ ಜಲಾಶಯದಿಂದ ಒಂದು ಅಡಿಗೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಿ ಕನ್ನಂಬಾಡಿ ಅಣೆಕಟ್ಟೆ ತುಂಬಿಸಿ ಬಾಗಿನ ಅರ್ಪಿಸಿದ್ದರು.
ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿತ್ತು. ಆ ಸಂದರ್ಭದಲ್ಲಿ ಕಾರಣಾಂತರಗಳಿಂದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಬರಲಾಗಿರಲಿಲ್ಲ. ಅಂದು ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಬಾಗಿನ ಅರ್ಪಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿ ಒಂದು ಬಾರಿ ಮತ್ತು ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಬಾಗಿನ ಅರ್ಪಿಸುತ್ತಿರುವ ಜೊತೆಗೆ ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿರುವ ಮೊದಲೇ ಸಿಎಂ ಎನ್ನುವುದು ವಿಶೇಷ.
ನಂತರ ೧೯೮೦ರಲ್ಲಿ ಮುಖ್ಯಮಂತ್ರಿಯಾದ ಡಿ.ಗುಂಡೂರಾವ್ ಅವರು ಈ ಪರಂಪರೆಯನ್ನು ಮುಂದುವರಿಸಿದರು. ನಂತರ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ, ಎಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್, ಎಸ್.ಎಂ.ಕೃಷ್ಣ, ಎನ್.ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ೧೯೮೮ರಲ್ಲಿ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯ ಅವರೂ ಸಹ ಬಾಗಿನ ಸಲ್ಲಿಸಿದವರಾಗಿದ್ದಾರೆ.
ಬಾಗಿನ ಅರ್ಪಿಸುವ ಸ್ಥಳದಲ್ಲಿ ಕಟಕಟೆಗಳನ್ನು ಕಟ್ಟಲಾಗಿದೆ. ಅಣೆಕಟ್ಟೆ ಮೇಲ್ಬಾಗದಲ್ಲಿ ಎರಡು ಭಾಗದ ತಡೆಗೋಡೆಗಳಿಗೆ ಸುಣ್ಣ-ಬಣ್ಣ ಬಳಿಯಲಾಗಿದೆ. ಕನ್ನಡ ದ್ವಜ ಕಟ್ಟಿ, ಶಾಮಿಯಾನ ಹಾಕಿ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿದೆ.
ಜಲಾಶಯದ ಕೆಳ ಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ. ಪೂಜಾ ಸ್ಥಳವನ್ನು ಸಹ ತಳಿರು ತೋರಣ ಹಾಗೂ ವಿಶೇಷ ಹೂವುಗಳಿಂದ ಅಲಂಕರಿಸಲಾಗಿದೆ. ಈಗಾಗಲೇ ವೈದಿಕರ ತಂಡ ೪೦ ಜೋಡಿ ಮೊರದಲ್ಲಿ ಬಳೆ, ಹಸಿರು ಬಣ್ಣದ ರವಿಕೆ ಕಣ, ಹರಿಷಿಣ-ಕುಂಕುಮ ಸೇರಿದತೆ ಇತರ ದ್ರವ್ಯಾಧಿ ಸಾಮಗ್ರಿಗಳಿಂದ ಕೂಡಿದ ಬಾಗಿನ ಸಿದ್ಧಪಡಿಸಿಕೊಳ್ಳುತ್ತಿದೆ. ಮಧ್ಯಾಹ್ನ ೧೨.೩೦ಕ್ಕೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ಬಾಗಿನ ಅರ್ಪಣೆ ನಡೆಸಲಾಗುವುದು ಎಂದು ಡಾ. ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ.
ನಿಷೇಧ: ಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳನ್ನು ಹೊರತುಪಡಿಸಿ ಕಾರ್ಯಕರ್ತರು ಮತ್ತು ಇತರರಿಗೆ ಅಣೆಕಟ್ಟೆಯ ಮೇಲ್ಬಾಗಕ್ಕೆ ತೆರಳುವುದನ್ನು ನಿಷೇದಿಸಲಾಗಿದೆ. ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.