ತಾಲೂಕಿನ 8 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ತಾಲೂಕಿನ 8 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ವಿಶೇಷ ಕಾರ್‍ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ, ಶಾಲೆ, ಕಾಲೇಜು, ಅಂಗನವಾಡಿ, ಆರೋಗ್ಯ ಕೇಂದ್ರಗಳು, ವಿದ್ಯಾರ್ಥಿನಿಲಯಗಳು ಸೇರಿದಂತೆ ಎಲ್ಲೆಡೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರನ್ನು ಎಂದಿನಂತೆ ಸಮರ್ಪಕವಾಗಿ ಪೂರೈಸಬೇಕು ಎಂದು ಶಾಸಕರು ಸೂಚಿಸಿದರು. ಕುಡಿಯುವ ನೀರಿನ ಪೂರೈಕೆ ಸಂದರ್ಭ ವಿದ್ಯುತ್ ಕಡಿತಗೊಳಿಸಬಾರದು, ಸಾರ್ವಜನಿಕರು ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ನಗರಸಭೆಯಿಂದ ಆಗಾಗ್ಗೆ ಸೂಚನೆ ನೀಡಬೇಕು ಎಂದರು. ಜಲಜೀವನ್ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೇಸಿಗೆಯಲ್ಲಿ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ವತಿಯಿಂದ ಎಚ್ಚರ ವಹಿಸಬೇಕು. ಜತೆಗೆ ಜಾಗೃತಿ ಮೂಡಿಸಬೇಕು. ಶಾಲೆ, ಕಾಲೇಜು, ಸೇರಿದಂತೆ ವಿವಾಹ ಸಂದರ್ಭದಲ್ಲಿ ನೀರಿನ ಟ್ಯಾಂಕ್‌ಗಳನ್ನು ಪರಿಶೀಲಿಸುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸಂಬಂಧ ಪಟ್ಟವರಿಗೆ ಸೂಚನೆ ನೀಡಬೇಕು. ರಾಜಕಾಲುವೆ, ಚರಂಡಿಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆಗಳಿಗೆ ಅಡ್ಡವಾಗಿ ಬೆಳೆದಿರುವ ಗಿಡಗಂಟಿಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುಕೂಲ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿರಬೇಕು ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಅಂಗನವಾಡಿಗಳಿಗೆ ಸಮಯಕ್ಕೆ ಸರಿಯಾಗಿ ಪೌಷ್ಠಿಕಾಂಶದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕು. ಅಧಿಕಾರಿಗಳು ಸಮನ್ವಯತೆಯಿಂದ ಕಾರ್‍ಯನಿರ್ವಹಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವಂತಾಗಬೇಕು ಎಂದರು. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಪ್ರಗತಿ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ಅವರಿಂದ ಶಾಸಕರು ಮಾಹಿತಿ ಪಡೆದರು.
ತಾಪಂ ಇಒ ಶೇಖರ್ ಮಾತನಾಡಿ, ಈಗಾಗಲೇ ಗ್ರಾ.ಪಂ ಮಟ್ಟದಲ್ಲಿ ಟಾಸ್ಟ್ ಫೋರ್ಸ್ ಸಭೆ ನಡೆಸಲಾಗಿದ್ದು, ಕುಡಿಯುವ ನೀರು ಮತ್ತು ಜಾನುವಾರಿಗೆ ಮೇವು ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್, ತಾಪಂ ಆಡಳಿತಾಧಿಕಾರಿ ಚಂದ್ರಶೇಖರ್, ತಹಸೀಲ್ದಾರ್ ಶ್ರೀಧರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಧರ್, ಸೆಸ್ಕ್ ಎಇಇ ವಿನಯ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒಗಳು, ಗ್ರಾಮ ಆಡಳಿತರಾಧಿಕಾರಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.