ಗಮನಸೆಳೆಯುತ್ತಿರುವ ಗಿಟಾರ್, ಫಿಶ್, ಗಂಡ ಭೇರುಂಡ, ಛೋಟಾಭೀಮ್ ಮಾದರಿ ಕೇಕ್ ಗಳು
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಚಾಮುಂಡೇಶ್ವರಿ ಬಡಾವಣೆಯ ಬೇಕ್ ಪಾಯಿಂಟ್ ಆವರಣದಲ್ಲಿ 2025ರ ಹೊಸ ವರ್ಷ ಆಚರಣೆ ಪ್ರಯುಕ್ತ ಅಭಿರುಚಿಗೆ ತಕ್ಕಂತೆ ಕೇಕ್‌ಗಳ ಮುಕ್ತ ಪ್ರದರ್ಶನ ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು.
ಬೇಕ್ ಪಾಯಿಂಟ್ ಮಾಲೀಕ ಎಚ್.ಆರ್.ಅರವಿಂದ್ ಮಾತನಾಡಿ, ಜನರ ಅಭಿರುಚಿಗೆ ತಕ್ಕಂತೆ ಕೇಕ್‌ಗಳ ಮುಕ್ತ ಪ್ರದರ್ಶನ ಮಾರಾಟ ಮೇಳ ಆಯೋಜಿಸಿದ್ದೇವೆ. ಹೊಸ ಹೊಸ ಮಾದರಿಯ ಕೇಕ್‌ಗಳನ್ನು ಪ್ರದರ್ಶನ ಮಾಡುತ್ತ ಬಂದಿದ್ದೇವೆ. 25 ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಬೇಕರಿ ಪದಾರ್ಥಗಳನ್ನು ನೀಡುತ್ತಿದ್ದೇವೆ. ಅದರೊಟ್ಟಿಗೆ ಜನರ ಅಭಿರುಚಿಗೆ ತಕ್ಕಂತೆ 15 ವರ್ಷಗಳಿಂದ ಮುಕ್ತವಾಗಿ ವಿವಿಧ ಕೇಕ್ ಮತ್ತು ಪೇಸ್ಟ್ರಿಗಳನ್ನು ಭರ್ಜರಿಯಾಗಿ ಸಿದ್ಧಗೊಳಿಸಿ ಪ್ರದರ್ಶನಕ್ಕಿಟ್ಟು, ಗ್ರಾಹಕರೇ ಆಯ್ಕೆಮಾಡಿ ಪಡೆದುಕೊಳ್ಳುವ ಕೇಕ್‌ಮೇಳ ಸಾಗುತ್ತಿದೆ ಎಂದು ಹೇಳಿದರು.ಹೊಸ ವರ್ಷಕ್ಕೆ ಬ್ರೆಡ್, ಕ್ರೀಮ್, ಹಣ್ಣುಗಳು, ಚಾಕೋಲೇಟ್ ಚಿಪ್ಸ್, ಅಲಂಕಾರಿಕ ಸಿಹಿ ತಿನಿಸುಗಳನ್ನು ಬಳಸಿ ತಯಾರಿಸಿದ ಅತ್ಯಾಕರ್ಷಕ ಕೇಕ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಒಂದಕ್ಕೊಂದು ವಿಭಿನ್ನವಾಗಿರುವ ಕೇಕ್‌ಗಳು ಜನರ ಗಮನ ಸೆಳೆಯುತ್ತಿವೆ. ಗಿಟಾರ್, ಡಾಲ್, ಬಾರ್ಬಿ, ಫಿಶ್, ಹಾರ್ಟ್, ಗಂಡ ಭೇರುಂಡ, ಛೋಟಾಭೀಮ್, ಪಿರಮಿಡ್, ಗಿಫ್ಟ್ ಬ್ಯಾಗ್, ಪೆಂಗ್ವಿನ್, ಮಿಕ್ಕಿಮೌಸ್, ಸೂರ್ಯ, ನವಿಲು, ಪಾರಿವಾಳ ಸೇರಿದಂತೆ ಹಕ್ಕಿಪಕ್ಷಿಗಳು, ಮೊಸಳೆ, ಹೂವಿನ ಬೊಕ್ಕೆ ಮಾದರಿಯ ಕೇಕ್‌ಗಳು, ರುಚಿಕರ ಪೇಸ್ಟ್ರಿಗಳು ಅಲ್ಲಿವೆ. ಕಲ್ಲಂಗಡಿ, ಹಲಸಿನಹಣ್ಣು ಮಾದರಿಯ ಕೇಕ್‌ಗಳು ಜನರನ್ನು ಆಕರ್ಷಿಸುತ್ತಿವೆ. ನಾನಾ ಫ್ಲೇವರ್‌ಗಳ ಕ್ರೀಮ್ ಕೇಕ್ ಗಳ ಜತೆಗೆ ಕಿಲೋ ತೂಕದ ಹನಿಕೇಕ್‌ಗಳನ್ನು ಮೇಳದಲ್ಲಿಡಲಾಗಿದೆ.
ಕೇಕ್‌ಮೇಳಕ್ಕೆ ನಗರಸಭಾ ಅಧ್ಯಕ್ಷ ನಾಗೇಶ್ ಚಾಲನೆ ನೀಡಿದರು. ರಕ್ತದಾನಿ ಜೀವಧಾರೆ ನಟರಾಜ್ ಅವರನ್ನು ಅಭಿನಂದಿಸಲಾಯಿತು. ಮಾಜಿ ಪ್ರಧಾನಮಂತ್ರಿ ಅಟಲ್‌ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಶತಮಾನೋತ್ಸವಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ನಗರಸಭಾ ಉಪಾಧ್ಯಕ್ಷ ಅರುಣ್‌ಕುಮಾರ್, ಮುಡಾ ಅಧ್ಯಕ್ಷ ನಹೀಂ, ಬಿಜೆಪಿ ಮುಖಂಡ ವಸಂತಕುಮಾರ್, ಚಲನಚಿತ್ರ ನಾಯಕ ನಟ ಸೂರ್ಯ, ಚನ್ನಪ್ಪ, ಮೈತ್ರಿ ಮತ್ತಿತರರಿದ್ದರು.