ಬಾಲಗಂಗಾಧರನಾಥ ಸ್ವಾಮೀಜಿ ಕನಸು । 300 ಎಕರೆ ಜಾಗದಲ್ಲಿ ನಿರ್ಮಾಣ
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ತಾಲೂಕಿನ ಮಾಯಸಂದ್ರ ಟಿಬಿ ಕ್ರಾಸ್ ಬಳಿ ಡಿ.೨ ರಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಚಾಲನೆ ದೊರೆಯಲಿದೆ ಎಂದು ಆದಿಚುಂಚನಗಿರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಾಜಿ ಕುಲಪತಿ ಎನ್.ಎಸ್.ರಾಮೇಗೌಡ ತಿಳಿಸಿದರು.
ಪಟ್ಟಣದ ಮಯೂರ ಕಾನ್ವೆಂಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಯಸಂದ್ರ ಟಿಬಿ ಕ್ರಾಸ್ ಬಳಿ ಇರುವ ಅನಾಥಾಶ್ರಮದ ಬಳಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಸುಮಾರು ೩೦೦ ಎಕರೆ ಪ್ರದೇಶದಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ತೆರೆಯಲಾಗುವುದು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಬಹತ್ವದ ಸಂದೇಶವಾಗಿದೆ. ಇದುವರೆಗೂ ಸರ್ಕಾರ ಖಾಸಗಿಯವರಿಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ತೆರೆಯಲು ಅವಕಾಶ ನೀಡಿರಲಿಲ್ಲ. ಆದರೆ ಈಗ ಖಾಸಗಿಯವರೂ ಸಹ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ತೆರೆಯಲು ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.ಬಹು ವರ್ಷಗಳ ಕನಸು:
ಪಿಯುಸಿ ನಂತರದಲ್ಲಿ ಈ ಶಿಕ್ಷಣವನ್ನು ಪಡೆಯಬಹುದಾಗಿದೆ. ನಾಲ್ಕು ವರ್ಷಗಳ ಅವಧಿಯ ಈ ಶಿಕ್ಷಣಕ್ಕೆ ಪ್ರತಿ ತರಗತಿಗೆ ಸುಮಾರು ೬೦ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಇದರಲ್ಲಿ ಶೇಕಡಾ ೫೦ ರಷ್ಟು ಸೀಟುಗಳು ರೈತರ ಮಕ್ಕಳಿಗೆ ಮೀಸಲಿದೆ. ಇದರಲ್ಲಿ ೩೬ ವಿದ್ಯಾರ್ಥಿಗಳನ್ನು ಸಿಇಟಿ ಮೂಲಕವೂ ೨೪ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಮೂಲಕ ಕಾಲೇಜಿಗೆ ಸೇರ್ಪಡೆ ಮಾಡಬಹುದಾಗಿದೆ. ಈಗಾಗಲೇ ಹಲವಾರು ಸೀಟುಗಳು ಭರ್ತಿಯಾಗಿದೆ. ಇನ್ನೂ ಕೆಲವು ಸೀಟುಗಳು ಖಾಲಿ ಇವೆ. ತಾಲೂಕಿನ ರೈತರ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯರಾದ ಶಿವಲಿಂಗೇಗೌಡರು, ನಾಗಮಂಗಲ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ, ಆದಿಚುಂಚನಗಿರಿ ವಿಶ್ವವಿದ್ಯಾನಿಯದ ಅಧಿಕಾರಿ ಚಂದ್ರೇಗೌಡ, ಪ್ರೊ.ಪುಟ್ಟರಂಗಪ್ಪ ಇದ್ದರು.