ರೋಗಿ ಬದುಕುಳಿಯಲು ನೆರವಾಗುವ ಗೋಲ್ಡನ್ ಅವರ್‌ನ ಒಳಗಾಗಿ ತುರ್ತು ಆ್ಯಂಬುಲೆನ್ಸ್ ಸೇವೆ ಒದಗಿಸುವ ರಾಜ್ಯ ಆರೋಗ್ಯ ಇಲಾಖೆ ಆರಂಭಿಸಿರುವ ಅತ್ಯಾಧುನಿಕ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರೋಗಿ ಬದುಕುಳಿಯಲು ನೆರವಾಗುವ ಗೋಲ್ಡನ್ ಅವರ್‌ನ ಒಳಗಾಗಿ ತುರ್ತು ಆ್ಯಂಬುಲೆನ್ಸ್ ಸೇವೆ ಒದಗಿಸುವ ರಾಜ್ಯ ಆರೋಗ್ಯ ಇಲಾಖೆ ಆರಂಭಿಸಿರುವ ಅತ್ಯಾಧುನಿಕ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು.
108 ಆರೋಗ್ಯ ಕವಚ, ನಗು-ಮಗು ಮತ್ತು ಇತರ ಆ್ಯಂಬುಲೆನ್ಸ್ ಸೇವೆಗಾಗಿ ಕರೆ ಮಾಡುವವರಿಗೆ 5 ಸೆಕೆಂಡುಗಳ ಒಳಗೆ ಪ್ರತಿಕ್ರಿಯೆ ಹಾಗೂ ತುರ್ತಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲು ಆರೋಗ್ಯ ಇಲಾಖೆ ನೂತನ ವ್ಯವಸ್ಥೆ ಮಾಡಿದೆ. ಈ ಸೇವೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರದಿಂದ ಲಭ್ಯವಾಗಲಿದೆ. ಇದು ದೇಶದಲ್ಲೇ ಪ್ರಥಮ ಸರ್ಕಾರಿ ಸ್ವಾಮ್ಯದ ಆ್ಯಂಬುಲೆನ್ಸ್ ಸೇವೆ ಆಗಿದೆ.
ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ ಅವರು, ಅಪಘಾತ, ಹೆರಿಗೆ, ಹೃದಯಾಘಾತ ಸೇರಿ ಗಂಭೀರ, ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸುವವರಿಗೆ ತಕ್ಷಣ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸುಮಾರು 18 ವರ್ಷಗಳಿಂದ ಇರುವ 108 ಆಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನೆರವಾಗಲಿದೆ. ಕಳೆದ ಬಜೆಟ್ ಘೋಷಣೆಯಂತೆ ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.
ಶೇ.80 ರಷ್ಟು ಜನ ಸಾವಿನಿಂದ ಪಾರು:
ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ದೊರೆತರೆ ರೋಗಿಗಳು ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. ಗೋಲ್ಡನ್ ಅವರ್‌ನಲ್ಲಿ ದೊರೆತ ಚಿಕಿತ್ಸೆಯಲ್ಲಿ ಸುಮಾರು ಶೇ.80 ರಷ್ಟು ಮಂದಿ ಬದುಕುಳಿದಿದ್ದಾರೆ. ಜೀವನ್ಮರಣದ ಹೋರಾಟದಲ್ಲಿ ತುರ್ತು ಚಿಕಿತ್ಸೆ ಹೆಚ್ಚಿನ ಮಹತ್ವ ಹೊಂದಿದೆ. ಹೀಗಾಗಿ ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ಲಭಿಸುವಂತಾಗುವುದು ಮುಖ್ಯ. ಸರ್ಕಾರದ ಗುಣಮಟ್ಟದ ಆರೋಗ್ಯ ಸೇವೆಯಿಂದ ಜನರ ವಿಶ್ವಾಸ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರದ್ಧವಹಿಸಿ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.
ಖಾಸಗಿ ಕೈಯಲ್ಲಿದ್ದಾಗ ಹೊಣೆಗಾರಿಕೆ ಇರಲಿಲ್ಲ:
ಬೆಂಗಳೂರು ನಗರದಲ್ಲಿ 65 ರಿಂದ 70 ಆ್ಯಂಬುಲೆನ್ಸ್‌ಗಳಿದ್ದು, ತುರ್ತು ಚಿಕಿತ್ಸೆಗೆ ನೆರವಾಗಿವೆ. 108 ಆ್ಯಂಬುಲೆನ್ಸ್ ವ್ಯವಸ್ಥೆ ಖಾಸಗಿಯವರ ಕೈಯಲ್ಲಿದ್ದಾಗ, ಅವರ ಹೊಣೆಗಾರಿಕೆ ಪ್ರಶ್ನಿಸುವಂತಿರಲಿಲ್ಲ. ಆದರೆ ಪ್ರಸ್ತುತ ಈ ವ್ಯವಸ್ಥೇ ಸರ್ಕಾರದ ಅಧೀನದಲ್ಲಿರುವುದರಿಂದ ಈ ಸೇವೆಯ ಹೊಣೆಗಾರಿಕೆ ಹೆಚ್ಚಿದೆ ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.ಆ್ಯಂಬುಲೆನ್ಸ್‌ಗಾಗಿ ನಿತ್ಯ 4,500ಕ್ಕೂ ಹೆಚ್ಚು ಕರೆ:ರಾಜ್ಯದಲ್ಲಿ 108 ಸೇರಿ ಸರ್ಕಾರಿ ಆಸ್ಪತ್ರೆಗಳ ಒಂದು ಸಾವಿರ ಆಂಬ್ಯುಲೆನ್ಸ್‌ಗಳಿವೆ. ಕಂಟ್ರೊಲ್ ಸೆಂಟರ್‌ಗೆ ಪ್ರತಿನಿತ್ಯ 24 ಗಂಟೆಗಳಲ್ಲಿ ಸರಿ ಸುಮಾರು 4500ಕ್ಕೂ ಕರೆಗಳು ಬರುತ್ತಿವೆ. ಇವುಗಳನ್ನು ತುರ್ತಾಗಿ ಅಟೆಂಡ್ ಮಾಡಿ ಆ್ಯಂಬುಲೆನ್ಸ್ ಒದಗಿಸಲು ಉಂಟಾದ ತಾಂತ್ರಿಕ ಸಮಸ್ಯೆಗಳಿಗೆ ನೂತನ ಕಮಾಂಡ್, ಕಂಟ್ರೋಲ್ ಸೆಂಟರ್ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಕಾರ್ಯನಿರ್ವಹಣೆ ಹೇಗೆ?:ಆ್ಯಂಬುಲೆನ್ಸ್‌ಗಾಗಿ ಬರುವ ಕರೆಗಳ ನಿರ್ವಹಣೆಗೆ 50 ಸೀಟು ಸಾಮರ್ಥ್ಯದ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ರೂಪಿಸಲಾಗಿದೆ. ಸೆಂಟರ್‌ನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳ ವಿವರಗಳ ಮ್ಯಾಪಿಂಗ್ ಮಾಡಿಕೊಳ್ಳಲಾಗಿದೆ. ಈ ಹಿಂದೆ 108ಗೆ ಕರೆ ಮಾಡಿದವರ ನಿಖರ ವಿಳಾಸ, ಸೇರಿ ಇತರೆ ವಿವರ ತಿಳಿಯುತ್ತಿರಲಿಲ್ಲ. ಜತೆಗೆ, ರಿಯಲ್ ಟೈಂನಲ್ಲಿ ಸೇವೆ ಒದಗಿಸಲು ಕೆಲ ಸಮಸ್ಯೆಗಳಿದ್ದವು. ಆದರೆ ಈಗ ಕರೆಮಾಡಿದ ಸಂಖ್ಯೆ, ಎಲ್ಲಿಂದ ಮಾಡಿದ್ದಾರೆ ಎಂಬ ನಕ್ಷೆ ಸಮೇತ ಸಂಪೂರ್ಣ ವಿವರ ಸೆಂಟರ್‌ನ ಸ್ಕ್ರೀನ್‌ನಲ್ಲಿ ಲಭ್ಯವಾಗುತ್ತದೆ.ಜತೆಗೆ, ಕರೆ ಬರುತ್ತಿದ್ದಂತೆ ಸೆಂಟರ್ ಸಿಬ್ಬಂದಿ ಟ್ಯಾಬ್ಲೆಟ್‌ನಲ್ಲಿ ರೋಗಿಯ ವಿವರ ಪಡೆದು ಅವರ ಸನಿಹದ 108ಗೆ ಸಂದೇಶ ರವಾನಿಸುತ್ತಾರೆ. ಎಲ್ಲ 108 ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಎಂಡಿಟಿ ಟ್ಯಾಬ್ಲೆಟ್ ಒದಗಿಸಲಾಗಿದೆ. ಎಂಡಿಟಿ ಮೂಲಕ ಸಂದೇಶ ಸ್ವೀಕರಿಸುವ ಆಂಬ್ಯುಲೆನ್ಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ರೋಗಿಯನ್ನು ಸಮೀಪದ ಸರಕಾರಿ ಆಸ್ಪತ್ರೆಗೆ (ರೋಗಿ ಬಯಸಿದಲ್ಲಿ ಖಾಸಗಿ ಆಸ್ಪತ್ರೆ) ಕರೆದೊಯ್ಯುತ್ತಾರೆ.
ಆ್ಯಂಬುಲೆನ್ಸ್ ಎಲ್ಲಿ ಬರುತ್ತಿದೆ ನೋಡಬಹುದು:ಆ್ಯಂಬುಲೆನ್ಸ್‌ಗಾಗಿ ಕರೆ ಮಾಡಿದ ರೋಗಿ ಕಡೆಯವರಿಗೂ ಆ್ಯಂಬುಲೆನ್ಸ್ ನಿಯೋಜನೆ ಆಗಿ ಬರುತ್ತಿರುವ ಬಗ್ಗೆ ಸಂದೇಶ ಹೋಗಲಿದೆ. ಅವರು ಆಂಬ್ಯುಲೆನ್ಸ್ ಎಲ್ಲಿದೆ? ಎಂದು ರಿಯಲ್ ಟೈಂನಲ್ಲಿ ಟ್ರ್ಯಾಕ್ ಮಾಡಬಹುದು. ಅದರಂತೆ ವಾಹನದ ಪ್ರತಿ ಚಲನೆಯನ್ನು ಕಮಾಂಡ್ ಸೆಂಟರ್ ಸಿಬ್ಬಂದಿ ಜತೆಗೆ ರೋಗಿ ಸಂಬಂಧಿಕರೂ ನೋಡಬಹುದು. ಇದರಿಂದ ಆಸ್ಪತ್ರೆಯ ವಿವರ ಸೇರಿ ಅಗತ್ಯ ಸೂಚನೆ ನೀಡಲು ಕೂಡ ಸಾಧ್ಯವಾಗಲಿದೆ. 108ನಲ್ಲಿರುವ ವೈದ್ಯಕೀಯ ಸಿಬ್ಬಂದಿ ಬಯಸಿದಲ್ಲಿ ಹೆಚ್ಚಿನ ನೆರವನ್ನು ತಜ್ಞ ವೈದ್ಯರಿಂದ ಪಡೆಯುವ ಅವಕಾಶವೂ ಇದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರು ಲಭ್ಯವಿದ್ದಾರಾ? ಇಲ್ಲವಾ? ಎಂಬ ವಿವರವನ್ನು ಇದರಲ್ಲಿ ಅಪ್ಡೇಟ್ ಮಾಡಲಾಗುವುದು ಎಂದು ಕಮಾಂಡ್ ಸೆಂಟರ್ ಮೇಲ್ವಿಚಾರಕರು ಮಾಹಿತಿ ನೀಡಿದರು.
108 ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಲೋಕಾರ್ಪಣೆಗೊಳಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದರ ಕಾರ್ಯವೈಖರಿ ವೀಕ್ಷಿಸಿದರು. ಈ ವೇಳೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಯನಿರ್ವಹಿಸುವ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.