ಸಂಚಾರಿ ಸಮುದಾಯ ಕ್ಲಿನಿಕ್‌ಗೆ ಚಾಲನೆ

KannadaprabhaNewsNetwork | Published : Jul 14, 2024 1:39 AM

ಸಾರಾಂಶ

ಈ ಸಂಚಾರಿ ಕ್ಲಿನಿಕ್‌ನಲ್ಲಿ ಹೃದಯ ಸಂಬಂಧಿ ರೋಗಿಗಳಿಗೆ ಉಚಿತ ತಪಾಸಣೆ, ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಮ್ಯಾಮೋಗ್ರಾಂ ಸಾಧನಗಳು, ಇಸಿಜಿ, ಎಕೋ, ರಕ್ತಪರೀಕ್ಷೆ ಮತ್ತಿತರ ಆಧುನಿಕ ಸೌಲಭ್ಯಗಳನ್ನು ಈ ಸಂಚಾರಿ ಕ್ಲಿನಿಕ್ ಹೊಂದಿದೆ

ಕನ್ನಡಪ್ರಭ ವಾರ್ತೆ ಕೋಲಾರಹೃದ್ರೋಗ ಹಾಗೂ ಕ್ಯಾನ್ಸರ್ ಸಂಬಂಧಿತ ಸಮಸ್ಯೆಗಳಿಗೆ ಮನೆ ಬಾಗಿಲಲ್ಲೇ ಉಚಿತ ತಪಾಸಣೆ ಒದಗಿಸುವ ‘ಚಕ್ರಗಳ ಮೇಲೆ ಆರೋಗ್ಯ’ ವೋಲ್ವೊ ಸಂಚಾರಿ ಸಮುದಾಯ ಆರೋಗ್ಯ ಕ್ಲಿನಿಕ್‌ಗೆ ಎಡಿಸಿ ಮಂಗಳಾ ಚಾಲನೆ ನೀಡಿ, ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಳ್ಳುವಂತೆ ಮನವಿ ಮಾಡಿದರು. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾರಾಯಣ ಹೃದಯಾಲಯ, ವೋಲ್ವೊ ಕಂಪನಿ ಹಾಗೂ ಸಿಎಸ್‌ಆರ್ ನಿಧಿ ಸಹಯೋಗದಲ್ಲಿ ಸಿದ್ಧಗೊಂಡಿರುವ ‘ಚಕ್ರಗಳ ಮೇಲೆ ಆರೋಗ್ಯ’ ವೋಲ್ವೊ ಸಂಚಾರಿ ಕ್ಲಿನಿಕ್‌ಗೆ ಜಿಲ್ಲಾಸ್ಪತ್ರೆ ಮುಂಭಾಗ ಚಾಲನೆ ನೀಡಿ ಮಾತನಾಡಿದರು.ತಪಾಸಣೆಗೆ ಆಧುನಿಕ ಸೌಲಭ್ಯ

ಸಿಎಸ್‌ಆರ್ ನಿಧಿಯಿಂದ ಸಿದ್ಧಗೊಂಡಿರುವ ಅತ್ಯಂತ ಸುಸಜ್ಜಿತ ಸೌಲಭ್ಯಗಳಿರುವ ಈ ಸಂಚಾರಿ ಕ್ಲಿನಿಕ್‌ನಲ್ಲಿ ಹೃದಯ ಸಂಬಂಧಿ ರೋಗಿಗಳಿಗೆ ಉಚಿತ ತಪಾಸಣೆ, ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಮ್ಯಾಮೋಗ್ರಾಂ ಸಾಧನಗಳು, ಇಸಿಜಿ, ಎಕೋ, ರಕ್ತಪರೀಕ್ಷೆ ಮತ್ತಿತರ ಆಧುನಿಕ ಸೌಲಭ್ಯಗಳನ್ನು ಈ ಸಂಚಾರಿ ಕ್ಲಿನಿಕ್ ಹೊಂದಿದೆ ಎಂದರು.ಕ್ಯಾನ್ಸರ್ ಆರಂಭದಲ್ಲೇ ಪತ್ತೆ ಹಚ್ಚಿದಲ್ಲಿ ಗುಣಪಡಿಸುವುದರ ಜತೆ ಜೀವ ಕಾಪಾಡಬಹುದಾಗಿದೆ. ಆದರೆ ಗ್ರಾಮೀಣ ಜನತೆಯಲ್ಲಿ ಅರಿವಿನ ಕೊರತೆಯಿಂದಾಗಿ ಇಂದು ಅನೇಕರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚು

ಕ್ಯಾನ್ಸರ್, ಹೃದಯ ತಪಾಸಣೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ನೀಡಬೇಕಾದ ಕಾರಣ ಅನೇಕರು ತಪಾಸಣೆಯಿಂದ ದೂರ ಉಳಿಯುತ್ತಿದ್ದಾರೆ. ಇದು ಅವರ ಮುಂದಿನ ಬದುಕನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಕಂಪನಿಗಳ ಸಾಮಾಜಿಕ ಕಾಳಜಿಯ ಈ ಅನುದಾನ ಸದ್ಬಳಕೆಯಾಗಿದೆ, ದೊಡ್ಡ ಆಸ್ಪತ್ರೆಗಳಿಗೆ ಹೋಗಿ ತಪಾಸಣೆಗೆ ಒಳಗಾಗಲು ಸಾಧ್ಯವಿಲ್ಲದ ಆರ್ಥಿಕ ಶಕ್ತಿಯಿಲ್ಲದ ಜನತೆಗೆ ಇದು ಸಂಜೀವಿನಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.94 ಮಂದಿಗೆ ತಪಾಸಣೆ

ಬೆಳಗ್ಗೆ ೧೦ ರಿಂದ ಸಂಜೆ ೪.೩೦ ರವರೆಗೂ ನಡೆದ ಸಂಚಾರಿ ಕ್ಲಿನಿಕ್‌ನಲ್ಲಿ ೩೦ ಮಂದಿ ಇಸಿಜಿ, ೨೨ ಮಂದಿ ಎಕೋ, ೧೨ ಮಹಿಳೆಯರು ಸ್ತನ ಕ್ಯಾನ್ಸರ್ ಪತ್ತೆಯ ಮ್ಯಾಮೋಗ್ರಾಂ ಚಿಕಿತ್ಸೆಗೆ ಹಾಗೂ ೩೦ ಮಂದಿ ರಕ್ತ ಪರೀಕ್ಷೆಗೆ ಒಳಗಾದರು. ವೋಲ್ವೊ ಗ್ರೂಪ್ ಆಫ್ ಇಂಡಿಯಾದ ಸಿಎಸ್‌ಆರ್ ನಿರ್ದೇಶಕ ಹಾಗೂ ವೆಲ್‌ನೆಸ್ ಆನ್ ವೀಲ್ಸ್ ಯೋಜನೆಯ ಮುಖ್ಯಸ್ಥ ಜಿ.ವಿ.ರಾವ್ ಮಾತನಾಡಿದರು. ಜಿಲ್ಲಾಸ್ಪತ್ರೆಯ ಆರ್‌ಎಂಒ ಡಾ.ಬಾಲಸುಂದರ್, ನಾರಾಯಣಹೃದಯಾಲಯದ ಹೆಲ್ತ್ ಟೀಮ್ ಮುಖ್ಯಸ್ಥ ಡಾ.ದೇವರಾಜ್ ಇದ್ದರು.

Share this article