ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯನಾಗರಾಧನೆಯ ಪುಣ್ಯತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗನ ರಕ್ಷಣೆಗೂ ಕ್ಷೇತ್ರದ ವತಿಯಿಂದ ಆದ್ಯತೆ ನೀಡಬೇಕಾದ ಅಗತ್ಯವಿದ್ದು, ಕ್ಷೇತ್ರದಲ್ಲಿ ನಾಗ ಸಂಚಾರ ಇರುವ ಪ್ರದೇಶದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಬೀಳಬೇಕಿದೆ.
ಸರ್ಕಾರದ ಮುಜರಾಯಿ ವ್ಯಾಪ್ತಿಯಲ್ಲಿನ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಎಲ್ಲ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.ಹಿಂದೆ ಕಾಡುಪ್ರದೇಶದಿಂದ ಕೂಡಿದ್ದ ಕುಕ್ಕೆ ಸುಬ್ರಹ್ಮಣ್ಯ ಇಂದು ಅಭಿವೃದ್ಧಿ ಹೊಂದುತ್ತಾ ಪಟ್ಟಣವಾಗಿ ಬೆಳೆದು ನಿಂತಿದೆ. ಇದರ ಜೊತೆಗೆ ಇಲ್ಲಿನ ನಾಗಗಳ ಸಂಚಾರವಿದ್ದು, ಇವುಗಳ ರಕ್ಷಣೆಗೂ ಕ್ಷೇತ್ರದ ವತಿಯಿಂದ ಪೂರಕ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ.
ಪ್ರಸ್ತುತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಾಂಕ್ರೀಟ್ ಕಾಮಗಾರಿಗಳು ನಡೆದಿದ್ದು, ಎಲ್ಲ ಕಡೆಗಳಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಇದರಿಂದಾಗಿ ಕ್ಷೇತ್ರದ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಕೆಲವೊಮ್ಮೆ ವಾಹನಗಳ ಚಕ್ರದಡಿ ಸಿಲಿಕಿ ಜೀವಿಗಳು ಪ್ರಾಣವನ್ನು ಕಸಿದುಕೊಳ್ಳುತ್ತಿದ್ದು, ಇದರಲ್ಲಿ ಸರ್ಪಗಳೂ ಸೇರಿವೆ. ಕ್ಷೇತ್ರದಲ್ಲಿ ಈವರೆಗೆ ಹಲವು ಸರ್ಪಗಳ ಸಾವು ಸಂಭವಿಸಿರುವುದು ಉಲ್ಲೇಖನೀಯ.ವೇಗಕ್ಕೆ ಬೀಳಬೇಕಿದೆ ಕಡಿವಾಣ: ಕ್ಷೇತ್ರದಲ್ಲಿ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಏಕಮುಖ ಸಂಚಾರದ ನಿಯಮವನ್ನೂ ರೂಪಿಸಲಾಗಿದೆ. ಇದರಿಂದ ವಾಹನ ಸವಾರರು ಅತಿ ವೇಗದಿಂದ ಸಂಚರಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅರಣ್ಯ ಪ್ರದೇಶ, ನದಿ-ತೋಡುಗಳ ಸಮೀಪದಲ್ಲೇ ಇದ್ದು, ಸರ್ಪಗಳು ಅರಣ್ಯ, ಪೇಟೆಯಲ್ಲೂ ಸಂಚರಿಸುತ್ತಿರುತ್ತದೆ. ರಸ್ತೆಯನ್ನೂ ದಾಟುತ್ತಿರುತ್ತವೆ. ಆದರೆ ದುರಾದೃಷ್ಟ ಸಂದರ್ಭದಲ್ಲಿ ರಸ್ತೆ ದಾಟುವ ಅಥವಾ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನದಡಿಕೆ ಸರ್ಪಗಳು ಸಿಲುಕಿ ಸಾವನ್ನಪ್ಪುವ ಘಟನೆಯೂ ಇಲ್ಲಿ ಸಂಭವಿಸುತ್ತಿವೆ. ಇದಕ್ಕಾಗಿ ಕ್ಷೇತ್ರದಲ್ಲಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣವನ್ನು ಅಗತ್ಯವಾಗಿ ಹಾಕಬೇಕಿದೆ.
ಕ್ಷೇತ್ರದಲ್ಲಿ ಸರ್ಪಗಳು ಸಂಚರಿಸುವ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ವಾಹನ ಸಂಚಾರ ನಿರ್ಬಂಧ ಅಥವಾ ಸರ್ಪ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಜತೆಗೆ ಕ್ಷೇತ್ರದ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಿ ಸರ್ಪಗಳ ಸಂಚಾರಗಳನ್ನು ಜನತೆಗೆ ತಿಳಿಸಿ ವಾಹನಗಳ ವೇಗವನ್ನು ನಿಯಂತ್ರಿಸಲು ಸೂಚಿಸುವುದು, ಸರ್ಪಗಳ ರಕ್ಷಣೆಗೆ ಸಾರ್ವಜನಿಕರೂ ಸಹಕಾರ ನೀಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆದಿ ಸುಬ್ರಹ್ಮಣ್ಯ ಸಂಪರ್ಕ ರಸ್ತೆ, ಆದಿಶೇಷ ಗೆಸ್ಟ್ ಹೌಸ್ ಪ್ರದೇಶ ಹೆಚ್ಚಿನ ಸರ್ಪ ಸಂಚಾರದ ಸ್ಥಳಗಳು ಎಂದು ಗುರುತಿಸಿಕೊಂಡಿದೆ.ತಕ್ಷಣ ಸ್ಪಂದಿಸಲು ಆಗ್ರಹ: ವಿವಿಧ ಕಾರಣಗಳಿಂದ ಗಾಯಗೊಳ್ಳುವ ಸರ್ಪಗಳಿಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ (ಎಲ್ಲ ರೀತಿಯ ಹಾವುಗಳ) ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಅಗತ್ಯದ ಬಗ್ಗೆ ಒತ್ತಾಯಗಳು ಕೇಳಿಬಂದಿದೆ. ವಿವಿಧ ಕಾರಣಗಳಿಂದ ಸರ್ಪಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಕುಕ್ಕೆ ದೇವಳದ ಸಿಬ್ಬಂದಿ ತಕ್ಷಣವೇ ಸ್ಪಂದಿಸಿ ಅದಕ್ಕೆ ಅಂತಿಮ ಕಾರ್ಯಗಳನ್ನು ಸಂಪ್ರದಾಯದಂತೆ ನೆರವೇರಿಸಲು ದೇವಳದ ಕಡೆಯಿಂದ ಪೂರಕ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳೂ ಕೇಳಿಬಂದಿದೆ.................ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸರ್ಪಗಳ ಸಂಚಾರ ಇರುವ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಪಡೆಯಲಾಗುವುದು. ಸರ್ಪ ಸಂಚಾರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವ ಹಾಗೂ ಕ್ಷೇತ್ರದ ಎಲ್ಲ ಕಡೆಗಳಲ್ಲೂ ಸರ್ಪ ಸಂಚಾರದ ಫಲಕ ಅಳವಡಿಸಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣ ಹಾಕಿ ಸರ್ಪ, ಜಾನುವಾರು, ಪಶು-ಪಕ್ಷಿಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಸರ್ಪಗಳ ಚಿಕಿತ್ಸೆಗಳಿಗೂ ಕುಕ್ಕೆಯಲ್ಲೇ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಮನ ಹರಿಸುತ್ತೇವೆ- ಜುಬಿನ್ ಮೊಹಪಾತ್ರ, ಆಡಳಿತಾಧಿಕಾರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ