ಕನ್ನಡಪ್ರಭ ವಾರ್ತೆ ಅರಸೀಕೆರೆತಮ್ಮ ದಿನಚರಿಯಲ್ಲಿ ವೈಯಕ್ತಿಕ ಸಮಯವನ್ನು ಕಡಿಮೆ ಮಾಡಿಕೊಂಡರೂ, ಪ್ರತಿದಿನವೂ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಚಾಲಕರೂ ಸಾರ್ವಜನಿಕ ಸೇವೆಯಲ್ಲೇ ನಿರತರಾಗಿದ್ದಾರೆ ಎಂದು ನಿಲ್ದಾಣ ಮೇಲ್ವಿಚಾರಕರಾದ ಎಂ. ಆರ್. ವಿರೂಪಾಕ್ಷಯ್ಯ ಹೇಳಿದರು.ನಗರದ ಬಸ್ ಡಿಪೋದಲ್ಲಿ ಏರ್ಪಡಿಸಲಾಗಿದ್ದ ಚಾಲಕರ ದಿನಾಚರಣೆಯ ಅಂಗವಾಗಿ ಚಾಲಕರಿಗೆ ಪುಷ್ಪ ನೀಡಿ ಶುಭಾಶಯ ಕೋರಿಸಿ, ಸಿಹಿ ಹಂಚಿ ಮಾತನಾಡಿದ ಅವರು, ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸುವ ಹೊಣೆಗಾರಿಕೆ ಚಾಲಕರ ಮೇಲಿದೆ. ಮಳೆ, ಬಿಸಿಲು, ತಡರಾತ್ರಿ, ಹಬ್ಬ-ಹರಿದಿನಗಳನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುವ ಚಾಲಕರ ಸೇವೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.ಚಾಲಕರ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ, ಚಾಲಕರ ಶ್ರಮ, ತ್ಯಾಗ ಮತ್ತು ಜವಾಬ್ದಾರಿಯನ್ನು ಸಮಾಜಕ್ಕೆ ನೆನಪಿಸುವ ದಿನವಾಗಿದೆ. ರಸ್ತೆ ಸುರಕ್ಷತೆ, ಶಿಸ್ತುಬದ್ಧ ಚಾಲನೆ ಮತ್ತು ಪ್ರಯಾಣಿಕರೊಂದಿಗೆ ಸೌಜನ್ಯಪೂರ್ಣ ವರ್ತನೆ ಇವುಗಳ ಮೂಲಕ ಚಾಲಕರು ಸಂಸ್ಥೆಯ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಸಾರ್ವಜನಿಕರು ಕೂಡ ಚಾಲಕರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಕೃಷ್ಣಪ್ಪ ಮಾತನಾಡಿ, ಚಾಲಕರು ಸಂಸ್ಥೆಯ ಬೆನ್ನೆಲುಬು. ಅವರ ಶ್ರಮದಿಂದಲೇ ಸಾರಿಗೆ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ. ಚಾಲಕರ ಆರೋಗ್ಯ, ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಎಡಬ್ಲ್ಯೂಎಸ್ ನಂದಕುಮಾರ್, ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ಪೆಕ್ಟರ್ ರವಿ, ಟಿ.ಸಿ ರಘುನಂದನ್ ಹಾಗೂ ಚಾಲಕ ಗಿರೀಶ್ ಸೇರಿದಂತೆ ಸಿಬ್ಬಂದಿ ಹಾಜರಿದ್ದು, ಚಾಲಕರನ್ನು ಅಭಿನಂದಿಸಿದರು.