ಚಾಲಕರು ಮುಂಜಾಗೃತ ಕ್ರಮ, ಸಂಚಾರಿ ನಿಯಮ ಕಟ್ಟು ನಿಟ್ಟಾಗಿ ಪಾಲಿಸಿ: ಅನಿಲ್ ಕುಮಾರ್

KannadaprabhaNewsNetwork |  
Published : Aug 07, 2026, 02:00 AM IST
6ಕೆಎಂಎನ್ ಡಿ18 | Kannada Prabha

ಸಾರಾಂಶ

ಸುಗಮ ಸಂಚಾರದ ದೃಷ್ಟಿಯಿಂದ ಕಬ್ಬು ಸಾಗಾಣಿಕೆ ಮಾಡುವ ಲಾರಿ, ಟ್ರ್ಯಾಕ್ಟರ್ ಚಾಲಕರು ಹಾಗೂ ಎತ್ತಿನ ಗಾಡಿಗಳನ್ನು ಓಡಿಸುವ ರೈತರು ಪೊಲೀಸ್ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮ, ಸಂಚಾರಿ ನಿಯಮ ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸುಗಮ ಸಂಚಾರದ ದೃಷ್ಟಿಯಿಂದ ಕಬ್ಬು ಸಾಗಾಣಿಕೆ ಮಾಡುವ ಲಾರಿ, ಟ್ರ್ಯಾಕ್ಟರ್ ಚಾಲಕರು ಹಾಗೂ ಎತ್ತಿನ ಗಾಡಿಗಳನ್ನು ಓಡಿಸುವ ರೈತರು ಪೊಲೀಸ್ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮ, ಸಂಚಾರಿ ನಿಯಮ ಕಟ್ಟು ನಿಟ್ಟಾಗಿ ಪಾಲಿಸುವಂತೆ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ತಿಳಿಸಿದರು.

ಚಾಂಷುಗರ್ಸ್ ಕಾರ್ಖಾನೆ ಮತ್ತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಸಹಯೋಗದಲ್ಲಿ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್‌ಗಳಿಗೆ ರೇಡಿಯಮ್ ರಿಪ್ಲೆಕ್ಟರ್‌ಗಳನ್ನು ಅಳವಡಿಸಿ ಮಾತನಾಡಿದ ಅವರು, ಸ್ಪಷ್ಟವಾಗಿ ಕಾಣುವಂತೆ ರೆಡಿಯಮ್ ರಿಪ್ಲೆಕ್ಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮಾಲೀಕರಿಗೆ ಸೂಚಿಸಿದರು.

ಕಬ್ಬು ಸರಬರಾಜು ಮಾಡುವ ಲಾರಿ, ಟ್ರ್ಯಾಕ್ಟರ್ ಚಾಲಕರಿಗೆ ಹಾಗೂ ಎತ್ತಿನಗಾಡಿಗಳ ಹೊಂದಿರುವ ರೈತರಿಗೆ ಕೆಲವು ನಿಬಂಧನೆ, ಮಾರ್ಗಸೂಚಿ ಹೊರಡಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ವಾಹನಗಳಿಗೆ ತೂಕದ ಮಿತಿ ನಿಗದಿ ಮಾಡಲಾಗಿದೆ. ಎತ್ತಿನಗಾಡಿಯಲ್ಲಿ 3 ರಿಂದ 3.5 ಟನ್ ಸೇರಿದಂತೆ ಒಟ್ಟು ತೂಕ 6 ಟನ್‌ಗಿಂತ ಹೆಚ್ಚಿರಬಾರದು. ಟ್ರ್ಯಾಕ್ಟರ್‌ಗಳಲ್ಲಿ 6 ರಿಂದ 8 ಟನ್‌ವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮಿತಿಗಿಂತ ಹೆಚ್ಚಿದ್ದರೆ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಸ್ವೀಕರಿಸುವುದಿಲ್ಲ. ಪೊಲೀಸರು ದಂಡ ವಿಧಿಸಲಿದ್ದಾರೆ ಎಂದು ಎಚ್ಚರಿಸಿದರು.

ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿರಬೇಕು. ಒಂದು ಟ್ರ್ಯಾಕ್ಟರ್ ಎಂಜಿನ್‌ಗೆ ಎರಡು ಟ್ರೈಲರ್‌ಗಳಲ್ಲಿ ಅತಿ ಎತ್ತರಕ್ಕೆ ಕಬ್ಬು ತುಂಬಿ ಸಾಗಾಣೆ ನಿಯಂತ್ರಿಸಬೇಕು. ಚಕ್ರಗಳು (ಟೈರ್‌ಗಳು) ಸುಸ್ಥಿತಿಯಲ್ಲಿರಬೇಕು. ಜೊತೆಗೆ ಎಫ್‌ಸಿ ಚಾಲನೆ, ಚಾಲಕರಿಗೆ ಚಾಲನಾ ಪರವಾನಿಗೆ ಸೇರಿದಂತೆ ಇನ್ನಿತರ ದಾಖಲೆಗಳು ಕಡ್ಡಾಯವಾಗಿರಬೇಕು ಎಂದು ಸೂಚಿಸಿದರು.

ಕಬ್ಬನ್ನು ಕಾರ್ಖಾನೆಗೆ ಇಳಿಸಿದ ನಂತರ ಹೋಗುವ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್‌ಗಳು ಮರದ ಗೂಟಗಳನ್ನು ತೆಗೆಯದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಅವುಗಳನ್ನು ತೆರೆವುಗೊಳಿಸಬೇಕು. ಈ ಮಾರ್ಗಸೂಚಿ, ನಿಯಮಗಳನ್ನು ಚಾಲಕರು ಹಾಗೂ ರೈತರು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಭವಿಸುವ ಅಪಘಾತಗಳಿಗೆ ಅಥವಾ ರಸ್ತೆಯಲ್ಲಿ ಕಬ್ಬು ಬಿದ್ದು ಸಾರ್ವಜನಿಕರಿಗೆ ತೊಂದರೆಯಾದರೆ ಸಂಬಂಧಪಟ್ಟವರನ್ನು ನೇರ ಹೊಣೆಗಾರರಾಗುತ್ತಾರೆ ಎಂದರು.

ಇದೇ ವೇಳೆ ಪೊಲೀಸರು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಶ್ಲಾಘಿಸಿದರು. ಈ ವೇಳೆ ಕಾರ್ಖಾನೆ ಕಬ್ಬು ವಿಭಾಗದ ವ್ಯವಸ್ಥಾಪಕ ಮಹದೇವಪ್ರಭು, ಅಧಿಕಾರಿಗಳಾದ ನಿತೀಶ್‌ ಜಯರಾಮ್, ನಿಂಗಯ್ಯ, ಫೀಲ್ಡ್ ಮ್ಯಾನ್ ಕಾರ್ಕಹಳ್ಳಿ ಸಿದ್ದೇಗೌಡ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ: ಕೆ.ಆರ್.ನಂದಿನಿ
ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದರೆ ಭವಿಷ್ಯ ಉಜ್ವಲ: ಎಚ್.ಎಂ.ಆನಂದ್ ಕುಮಾರ್